ಕೋಣನೂರು ಲೋಕೇಶ್ ನಂಜನಗೂಡು
ತಂದೆಯ ಮಾತಿನಂತೆ ಪೊಲೀಸ್ ನೌಕರಿ ತ್ಯಜಿಸಿ, ಕೃಷಿಯಲ್ಲಿ ಯಶಸ್ಸು ಕಂಡು ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ ನಂಜನಗೂಡು ತಾಲೂಕಿನ ಹಳ್ಳಿದಡ್ಡಿ ಗ್ರಾಮದ ಬಿಬಿಎಂ ಪದವೀಧರ ನಂಜುಂಡಸ್ವಾಮಿ.
ತಮ್ಮ ಬಳಿ ಇರುವ ಒಂದು ಎಕರೆ ಜಮೀನಿನಲ್ಲಿ ವಾಸ ಮಾಡಲು ಒಂದು ಮನೆ, ಕುರಿ, ಕೋಳಿ, ಹಸು ಮತ್ತು ತೆಂಗಿನ ಬೆಳೆಯಿಂದ ವಾರ್ಷಿಕ ಒಂಬತ್ತು ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಕುರಿ ಸಾಕಣೆಯಿಂದ ಹೆಚ್ಚಿನ ಲಾಭ: ಪ್ರಾರಂಭದಲ್ಲಿ ಇವರಿಗೆ ಕುರಿ ಸಾಕಣೆ ಮಾಡುವ ಯೋಚನೆ ಬಂತು. ಒಂದು ಆಧುನಿಕ ರೀತಿಯ ಶೆಡ್ ನಿರ್ಮಾಣ ಮಾಡಲು ಮುಂದಾದರು. ಸರ್ಕಾರದ ನರೇಗಾ ಯೋಜನೆಯಿಂದ ದೊರೆಯುವ ಹಣದ ಜತೆಗೆ ಸ್ವತಃ ನಾಲ್ಕರಿಂದ ಐದು ಲಕ್ಷ ರೂ. ವಿನಿಯೋಗಿಸಿ ಆಧುನಿಕ ರೀತಿಯಲ್ಲಿ ಕುರಿ ಶೆಡ್ ನಿರ್ಮಾಣ ಮಾಡಿ ಪ್ರಾಯೋಗಿಕವಾಗಿ ಕುರಿ ಸಾಕಣೆಯಲ್ಲಿ ತೊಡಗಿಸಿಕೊಂಡರು. ಕುರಿ ಸಾಕಣೆಯಿಂದ ಲಾಭ ಬರುತ್ತದೆ ಎಂಬುದನ್ನು ಅರಿತ ನಂತರ ಸದ್ಯ ಸ್ಥಳೀಯ ಹಾಗೂ ಬಂಡೂರು ತಳಿಯ ಸುಮಾರು 100ಕ್ಕೂ ಹೆಚ್ಚು ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದರಿಂದಲೇ ವಾರ್ಷಿಕ 4 ಲಕ್ಷ ರೂ.ಗೂ ಅಧಿಕ ಲಾಭ ಗಳಿಸುತ್ತಿದ್ದಾರೆ.
ಮೊಟ್ಟೆ ಕೋಳಿ ಸಾಕಣೆ: ಕುರಿ ಶೆಡ್‌ನ ಜತೆಗೆ ಕೋಳಿ ಸಾಕಣೆ ಮಾಡುವ ಮೂಲಕ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಸುಮಾರು 50 ನಾಟಿ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಪ್ರತಿದಿನ 50 ಮೊಟ್ಟೆ ಉತ್ಪಾದನೆಯಾಗುತ್ತಿದೆ. ಒಂದು ಮೊಟ್ಟೆಗೆ 15 ರಿಂದ 20 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ನಂಜುಂಡಸ್ವಾಮಿ ತಮ್ಮ ಜಮೀನಿನಲ್ಲಿ 5 ಮಿಶ್ರ ತಳಿಯ ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಪ್ರತಿದಿನ 30 ರಿಂದ 40 ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ವಾರ್ಷಿಕ 2 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ಮೇವು ಉತ್ಪಾದನೆ: ತಮ್ಮ ಒಂದು ಎಕರೆ ಜಮೀನಿನಲ್ಲಿ ಎರಡು ಬೋರ್ವೆಲ್ ಕೊರೆಸಿದ್ದು, ಪಶುಗಳಿಗೆ ಬೇಕಾದ ಆಹಾರವನ್ನು ತಾವೇ ಬೆಳೆಯುತ್ತಾರೆ. ಕುರಿ ಮತ್ತು ಹಸುಗಳಿಗೆ ಹೈಬ್ರಿಡ್ ನೇಪಿಯರ್, ಜಾಯಿಂಟ್ ಕಿಂಗ್, ರೆಡ್ ನೇಪಿಯರ್ ಹುಲ್ಲನ್ನು ಜಮೀನಿನಲ್ಲಿ ಬೆಳೆಸಿದ್ದಾರೆ. ಮೇವು ಕತ್ತರಿಸಲು ಯಂತ್ರಗಳನ್ನು ಇಟ್ಟುಕೊಂಡಿದ್ದು, ಹೊರಗಡೆಯಿಂದ ಯಾವುದೇ ಮೇವು ಖರೀದಿ ಮಾಡದೆ, ವರ್ಷಪೂರ್ತಿ ಬೇಕಾದ ಮೇವನ್ನು ತಮ್ಮ ಜಮೀನಿನಲ್ಲೇ ಬೆಳೆಯುತ್ತಿದ್ದಾರೆ. ಜಮೀನಿನಲ್ಲಿ 50ಕ್ಕೂ ಹೆಚ್ಚು ತೆಂಗಿನ ಮರಗಳಿದ್ದು, ತೆಂಗಿನಕಾಯಿ, ಎಳನೀರು ಮಾರಾಟ ಮಾಡಿ ವಾರ್ಷಿಕವಾಗಿ ಒಂದು ಲಕ್ಷ ಆದಾಯ ಗಳಿಸುತ್ತಿದ್ದಾರೆ. ಹಸು, ಕುರಿ, ಕೋಳಿಯ ಗೊಬ್ಬರವನ್ನು ಜಮೀನಿಗೆ ಹಾಕಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲಾಗಿದೆ. ಹೆಚ್ಚುವರಿ ಗೊಬ್ಬರ ಮಾರಾಟ ಮಾಡಿ ವಾರ್ಷಿಕ 50 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.
ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ತೇರ್ಗಡೆ: ನಂಜುಂಡಸ್ವಾಮಿ ಬಿಬಿಎಂ ಪದವಿ ಮುಗಿಸಿ, ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತರಬೇತಿಗೆ ಹೋಗಬೇಕಾಗಿತ್ತು. ತಂದೆ ದೂರದ ಊರುಗಳಿಗೆ ಹೋಗಿ ಕೆಲಸ ನಿರ್ವಹಿಸುವ ಬದಲು ಜಮೀನಿನಲ್ಲೇ ಆಧುನಿಕ ಮಾದರಿಯಲ್ಲಿ ಕೃಷಿ ಮಾಡಿ ಸಾಧಿಸುವಂತೆ ಹೇಳಿದ ಸಲುವಾಗಿ ವಿವಿಧ ಮಾದರಿಯ ಹೈನುಗಾರಿಕೆ ಮೂಲಕ ಆದಾಯದ ಮೂಲ ಕಂಡುಕೊಂಡಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಜತೆಗೂಡಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ಖರ್ಚು ಕಡಿಮೆ ಆದಾಯ ಜಾಸ್ತಿ ಗಳಿಕೆಯಾಗುತ್ತಿದೆ.