ಜಿಲ್ಲೆ

ಹೈನುಗಾರಿಕೆಯಿಂದ ಅಭಿವೃದ್ಧಿ ಸಾಧ್ಯ

ಹಲಗೂರು: ಹೈನುಗಾರಿಕೆಯಿಂದ ಅಭಿವೃದ್ಧಿ ಹೊಂದಲು ಗ್ರಾಮಸ್ಥರು ಮುಂದಾಗಬೇಕು ಎಂದು ಕೆ.ಎಂ.ಎಫ್. ನಿರ್ದೇಶಕ ವಿ.ಎಂ. ವಿಶ್ವನಾಥ್ ಹೇಳಿದರು.
ಸಮೀಪದ ಯತ್ತಂಬಾಡಿ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಸಭಾಂಗಣ ಮತ್ತು ಪಶು ಆಹಾರ ದಾಸ್ತಾನು ಮಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಉತ್ತಮ ಸೇವೆಯಿಂದ ಡೇರಿ ಲಾಭ ಗಳಿಸಿದೆ. ಹಾಗಾಗಿ ಗ್ರಾಮದಲ್ಲೇ ಶೀಘ್ರವಾಗಿ ಕ್ಷೀರ ಕೇಂದ್ರ ಬ್ಯಾಂಕ್ ಪ್ರಾರಂಭಿಸುವ ಯೋಜನೆ ರೂಪಿಸಲಾಗುವುದು ಎಂದರು.
ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರೈತರ ಅಭಿವೃದ್ಧಿಗೆ ಬಿಡುಗಡೆಯಾದ ಕೆಲವು ಅನುದಾನ ಮತ್ತು ಸಾಲ ಸೌಲಭ್ಯಗಳನ್ನು ಡಿಸಿಸಿ ಬ್ಯಾಂಕ್ ಉದ್ದೇಶಪೂರ್ವಕವಾಗಿ ತಡೆ ಹಿಡಿಯುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಕ್ರಮ ವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಿವಮ್ಮ, ವಿಸ್ತರಣಾ ಅಧಿಕಾರಿ ಸಿದ್ದರಾಜು, ಸಂಘದ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಕೆ. ರಘು, ನಿರ್ದೇಶಕರಾದ ಶ್ರೀನಿವಾಸಮೂರ್ತಿ, ಕೆಂಪಸಿದ್ದೇಗೌಡ, ಕೃಷ್ಣ, ಗಾಯತ್ರಿ, ಪ್ರೇಮಾ ಇತರರು ಇದ್ದರು.