ಚಿಕ್ಕಮಗಳೂರು ತಾಲೂಕಿನ ಹಿರೇಗೌಜದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ೭ ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು. ಡಾ.ಮೋಹನ್ ಕುಮಾರ್, ಮಂಜುಳಾ, ಡಾ.ಹೇಮಂತ್ ಕುಮಾರ್, ಡಾ.ಚೈತ್ರಾ, ಡಾ.ವೀಣಾ ಕುಮಾರಿ ಮತ್ತಿತರರಿದ್ದರು. 
ಜಿಲ್ಲೆ

ಹೈನುಗಾರಿಕೆ ಉಳಿವಿಗೆ ಜಾನುವಾರು ಸಂರಕ್ಷಣೆ ಅಗತ್ಯ

ಚಿಕ್ಕಮಗಳೂರು: ಮಕ್ಕಳಿಗೆ ಎದೆ ಹಾಲು ಎಷ್ಟು ಮುಖ್ಯವೋ, ಹಸುವಿನ ಹಾಲೂ ಅಷ್ಟೇ ಮುಖ್ಯ. ಹಾಲು ಕೊಡುವ ಹಸು, ಜಾನುವಾರುಗಳ ಸಂರಕ್ಷಣೆ ಸಲುವಾಗಿ ಸರ್ಕಾರ ಪ್ರತಿವರ್ಷ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಸುತ್ತಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ತಾಲೂಕಿನ ಹಿರೇಗೌಜದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ೭ ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಹಸುವನ್ನು ಕಾಮಧೇನುವಿಗೆ ಹೋಲಿಸುತ್ತೇವೆ, ಪೂಜನೀಯ ಭಾವದಿಂದ ನೋಡುತ್ತೇವೆ. ಅಂತಹ ಹಸುಗಳ, ಜಾನುವಾರುಗಳ ಸಂರಕ್ಷಣೆ ಸರ್ಕಾರದ ಹೊಣೆ. ಹೀಗಾಗಿ ಪ್ರತಿ ವರ್ಷ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನ ನಡೆಸಿ ಹಾಲಿನ ಉತ್ಪನ್ನ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಮನುಷ್ಯರ ರೋಗ ನಿಯಂತ್ರಣಕ್ಕೆ ಹೇಗೆ ಲಸಿಕೆಗಳಿವೆಯೋ ಅದೇ ಮಾದರಿಯಲ್ಲಿ ಜಾನುವಾರುಗಳಿಗೆ ಯಾವುದೆ ಕಾಯಿಲೆ ಬರದಂತೆ ಲಸಿಕೆ ಹಾಕಲಾಗುತ್ತದೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಹಿಂದಿನಿAದಲೂ ನಮ್ಮ ಹಿರಿಯರು ಹಸುಸಾಕಾಣೆ ಮಾಡಿ ಜೀವನ ನಡೆಸಿದ್ದಾರೆ. ಇತ್ತೀಚೆಗೆ ಸರ್ಕಾರಗಳು ಉತ್ತಮ ತಳಿಯ ಹಸುಗಳನ್ನು ಪರಿಚಯಿಸಿದ್ದು ಇದರಿಂದ ಹಾಲಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ವಿದೇಶಕ್ಕೂ ಹಾಲಿನ ಉತ್ಪನ್ನಗಳು ರಫ್ತಾಗುತ್ತಿವೆ ಎಂದರು. ಹಾಲು ವಿದೇಶಕ್ಕೆ ಹೋಗಬೇಕಾದರೆ ಹಾಲಿನ ಗುಣಮಟ್ಟ ಉತ್ತಮವಾಗಿರಬೇಕು. ಈ ನಿಟ್ಟಿನಲಿ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಮೋಹನ್‌ಕುಮಾರ್ ಮಾತನಾಡಿ, ಕಳೆದ ೧೨ ವರ್ಷದಿಂದ ಸತತವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆ ರೋಗ ಲಕ್ಷಣಗಳು ಕಡಿಮೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಕೂಡ ಪೂರಕ. ಮನೆ ನಾಯಿಗಳಿದ್ದರೆ ಉಚಿತವಾಗಿ ರ‍್ಯಾಬಿಸ್ ಚುಚ್ಚುಮದ್ದು ನೀಡುತ್ತೇವೆ. ಬೀದಿ ನಾಯಿ ಹಿಡಿದು ತಂದಲ್ಲಿ ಅವುಗಳಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಹಿರೇಗೌಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಪಶುಸಂಗೋಪನಾ ಇಲಾಖೆ ಸಹಾಯಕ ಉಪನಿರ್ದೇಶಕ ಡಾ.ಹೇಮಂತ್‌ಕುಮಾರ್, ಪಶುವೈದ್ಯಾಕಾರಿ ಡಾ.ಚೈತ್ರಾ, ಡಾ,ವೀಣಾಕುಮಾರಿ ಮತ್ತಿತರರಿದ್ದರು.