ಕೊಳ್ಳೇಗಾಲ : ಹೈನುಗಾರಿಕೆ ಉತ್ತೇಜನಕ್ಕೆ ಹಾಲು ಕರೆಯುವ ಸ್ಪರ್ಧೆ ಪೂರಕವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಚಾಮರಾಜನಗರ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ಉತ್ತೇಜನ ನೀಡಲು ಇಂತಹ ಸ್ಪರ್ಧೆಗಳು ಅವಶ್ಯಕವಾಗಿವೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಈ ಸ್ಪರ್ಧೆ ನಡೆದಿದ್ದು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಕಾರ್ಯಾಗಾರವನ್ನು ಏರ್ಪಡಿಸೋಣ ಎಂದರು. ತಾಲೂಕು ವ್ಯಾಪ್ತಿಯಲ್ಲಿ ಇದ್ದ ಪಶುವ್ಯೆದ್ಯರ ಕೊರತೆಯನ್ನು ಇದೀಗ ಸುಧಾರಿಸಲಾಗಿದೆ. ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ವೆಂಕಟೇಶ್ ಅವರು ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಗೌಡಳ್ಳಿ ಹಾಗೂ ಗೂಳಿಪುರಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಿದ್ದಾರೆ. ಹಾಗೆಯೇ ಸಂತೇಮರಳ್ಳಿ ಮತ್ತು ಯಳಂದೂರು ಆಸ್ಪತ್ರೆಗಳ ಕಟ್ಟಡಕ್ಕೆ ತಲಾ 50 ಲಕ್ಷ ರೂ.ಮಂಜೂರು ಮಾಡಿ ರುವುದು ರೈತರಿಗೆ ಅನುಕೂಲವಾಗಲಿದೆ ಎಂದರು.
ಸರ್ಕಾರ ಜಿಲ್ಲೆಯ ನೀರಾವರಿ ಯೋಜನೆಗೆ 500 ಕೋಟಿ ರೂ.ಗಳ ಯೋಜನೆಯನ್ನು ಮಂಜೂರು ಮಾಡಿ ಕೊಟ್ಟರೆ ಎಲ್ಲ ಕಾಲುವೆಗಳು ಅಣೆಕಟ್ಟೆಗಳು ಪುನಃಶ್ಚೇತನಗೊಳ್ಳಲಿವೆ. ಈ ಪೈಲೆಟ್ ಪ್ರಾಜೆಕ್ಟ್ ಅನ್ನು ಮಂಜೂರು ಮಾಡಿಕೊಡುವಂತೆ ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿಗಳೂ ಆದ ಡಿ.ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಅರಣ್ಯ ಇಲಾಖೆಯಲ್ಲಿ ಹಲವು ಕಾಯ್ದೆಗಳು ಜಾರಿಗೆ ಬಂದು ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕ್ಷೇತ್ರದ ಬಿಳಿಗಿರಿರಂಗನಬೆಟ್ಟದ ದೇವಸ್ಥಾನದ ಆಸ್ತಿ 250 ಎಕರೆ ಇದೆ. ಇಲ್ಲಿ ಹೊರಗಡೆಯಿಂದ ಬಂದ ಬೇರೆಯವರಿಗೆ ಆಶ್ರಯ ನೀಡುತ್ತಿದ್ದಾರೆ. ಆದರೆ ಗಿರಿಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಕಾಡು ರೀತಿ ಇರುವುದನ್ನು ಅರಣ್ಯ ಎಂದು ಹೇಳಲಾಗುತ್ತಿದೆ. 7500 ಎಕರೆ ಪೈಕಿ 6500 ಎಕರೆ ಡ್ರೋನ್ ಸರ್ವೇ ಮಾಡಿಸಲಾಗಿದೆ. ರೈತ ಸಂಘದವರು ಈ ಬಗ್ಗೆ ಧ್ವನಿ ಎತ್ತಬೇಕು, ಹೋರಾಟ ಮಾಡಬೇಕು ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಗುಂಡೇಗಾಲದ ರೈತ ಆಕಾಶ್ ಅವರ ಹಸು ಬೆಳಗ್ಗೆ ಮತ್ತು ಸಂಜೆ 34.6 ಕೆ.ಜಿ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿ 10.000 ರೂ.ಬಹುಮಾನ ಪಡೆದುಕೊಂಡಿತು. ಜಿನಕನಹಳ್ಳಿ ಗ್ರಾಮದ ದಿಲೀಪ್ ಅವರ ಹಸು 27.73 ಕೆ.ಜಿ.ಹಾಲು ಕರೆದು ದ್ವಿತೀಯ ಬಹುಮಾನ 7.500 ರೂ.ಗಳಿಸಿದೆ. ಕೆಂಪನ ಪಾಳ್ಯ ಗ್ರಾಮದ ಮಹೇಶ್ ಅವರು 23.52 ಕೆ.ಜಿ. ಹಾಲು ಕರೆದು ತೃತೀಯ ಬಹುಮಾನ 5000 ರೂ.ಗಳನ್ನು ಗಳಿಸಿದರೆ, ಮುಡಿಗುಂಡದ ಮಂಜುನಾಥ್ 20.77 ಕೆ.ಜಿ ಹಾಗೂ ಕೆಂಪನಪಾಳ್ಯದ ಲಿಂಗರಾಜು 20.09 ಕೆ.ಜಿ ಹಾಲು ಕರೆಯುವ ಮೂಲಕ ಸಮಾಧಾನಕರ ಬಹುಮಾನ ಪಡೆದಿದ್ದು ಈ ಇಬ್ಬರಿಗೂ ತಲಾ ಎರಡೂವರೆ ಸಾವಿರ ರೂ.ಗಳನ್ನು ಶಾಸಕರು ವೈಯಕ್ತಿಕವಾಗಿ ನೀಡಿದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ ಶಂಕರ್, ಪಶುಸಂಗೋಪನ ಇಲಾಖೆಯ ಉಪನಿರ್ದೇಶಕ ಹನುಮೇಗೌಡ, ಪಶು ವೈದ್ಯ ಡಾ.ಶಿವಕುಮಾರ್, ಡಾ.ರವಿಕುಮಾರ್, ಮತ್ತಿತರಿದ್ದರು.