ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ 18.28ಲಕ್ಷ ರೂ.ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ. ನಿಶಾನಿ ಜಯಣ್ಣ ಹೇಳಿದರು. ನಗರ ದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸೊಸೈಟಿಯ 2024-25 ನೇ ಸಾಲಿನ 108ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾ ಡಿದರು.
ಸೊಸೈಟಿ ಕಟ್ಟಡದ ಮೇಲೆ ಐದು ಸಾವಿರ ಚದರಡಿ ವಿಸ್ತೀರ್ಣದಲ್ಲಿ 1.57 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸಮುದಾಯ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಇದಕ್ಕೆ ತಮ್ಮೆಲ್ಲರ ಒಪ್ಪಿಗೆ ಬೇಕು ಎಂದು ಸದಸ್ಯರನ್ನು ಕೋರಿದರು.
ಸೊಸೈಟಿಯಲ್ಲಿ 2613 ಸದಸ್ಯರಿದ್ದು, 49.88 ಸಾವಿರ ರೂ. ಷೇರು ಬಂಡವಾಳವಿದೆ. ಸೊಸೈಟಿ ಸ್ವಂತ ಕಟ್ಟಡವನ್ನೂ ಹೊಂದಿದೆ. 29.18 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಹಾಗೂ ಸಂಸ್ಥೆಗಳಲ್ಲಿ ತೊಡಗಿಸಲಾಗಿದೆ. ಸಾಲಗಾರರು ಸರಿಯಾದ ಸಮಯಕ್ಕೆ ಸಾಲದ ಕಂತು ಮತ್ತು ಬಡ್ಡಿ ಪಾವತಿಸ ಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಸಾಲಗಾರರಂತೆ ಜಾಮೀನುದಾರರ ಮೇಲೂ ಜವಾಬ್ದಾರಿ ಇದೆ. ನಿಯಮಿತ ಅವಧಿಯೊಳಗೆ ಸಾಲ ಮರುಪಾವತಿಸುವ ಹಾಗೂ ಹೆಚ್ಚು ಠೇವಣಿ ಇಡುವ ಮೂಲಕ ಸೊಸೈಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಗೃಹ ಸಾಲ, ಆಧಾರ ಸಾಲ, ವಾಹನ ಸಾಲ, ಜಾಮೀನು ಸಾಲ, ಬಂಗಾರದ ಮೇಲೆ ಹಾಗೂ ಕ್ಯಾಷ್ ಕ್ರೆಡಿಟ್ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು. ಎಲ್ಲ ಸದಸ್ಯರು ಕನಿಷ್ಠ ವ್ಯವಹಾರ ನಡೆಸಬೇಕು ಎಂದು ಕೋರಿದರು. ಒಂದು ಸಾವಿರ ರೂ. ಷೇರು ಮೊತ್ತವನ್ನು ಐದು ಸಾವಿರ ರೂ.ಗೆ ಹೆಚ್ಚಿಸಲು ಕಳೆದ ವಾರ್ಷಿಕ ಮಹಾಸಭೆ ತೀರ್ಮಾನಕ್ಕೆ ಹಾಗೂ ಡಿವಿಡೆಂಡ್ ಮೊತ್ತ 9.97ಲಕ್ಷ ರೂ.ಗಳನ್ನು ಭವನದ ನಿರ್ಮಾಣಕ್ಕೆ ಬಳಸಿಕೊಳ್ಳಲು ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.
ಸೊಸೈಟಿ ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ,ನಿರ್ದೇಶಕರಾದ ಸಿ.ಎಚ್. ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸಮೂರ್ತಿ, ಲಿಯಾಖತ್ ಅಲಿಖಾನ್, ಸಾಧಿಕ್‌ಬಾಷಾ, ಜಿ. ಸುರೇಶ್‌ಕುಮಾರ್, ಜೆ.ಆರ್. ಹರೀಶ್‌ಬಾಬು, ನಿಶಾನಿ ದಶರಥ್, ಒ. ತಿಪ್ಪೇಸ್ವಾಮಿ, ಚಂದ್ರಪ್ಪ, ಎ. ಚಂಪಕಾ, ಆರ್ಥಿಕ ಸಲಹೆಗಾರ ಮಹಮದ್ ನಯೀಮ್ ಇತರರು ಇದ್ದರು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಪ್ರಭಾರ ಕಾರ್ಯದರ್ಶಿ ಪಿ. ಮಂಜುನಾಥ್‌ಗೌಡ ವರದಿ ಮಂಡಿಸಿದರು.