ಜಯಪುರ: ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಜೆಜೆಎಮ್ ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ ಸರ್ಕಾರದ ಹಣ ಹಾಳುಮಾಡಿದ್ದಾರೆ ಎಂದು ಕೊಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ದೂರಿದರು.
ಗ್ರಾಪಂನಲ್ಲಿ ನಡೆದ ಜೆಜೆಎಮ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಮೂಲವಿಲ್ಲದೆ ಅನಗತ್ಯವಾಗಿ ಪೈಪ್‌ಲೈನ್ ಹಾಗೂ ನೀರಿನ ಟ್ಯಾಂಕ್ ಮಾಡಲಾಗಿದೆ. ಕಾಮಗಾರಿ ಅಂದಾಜು ಮತ್ತು ಯೋಜನೆ ತಯಾರು ಮಾಡುವ ಸಮಯದಲ್ಲಿ ಸ್ಥಳೀಯರು ಹಾಗೂ ಗ್ರಾಪಂ ಸಲಹೆ ಪಡೆಯದೆ ಕಾಮಗಾರಿ ಮಾಡಲಾಗಿದೆ. ಇದು ಸರ್ಕಾರಿ ಹಣ ಲೂಟಿ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದರು.
ಜನರಿಗೆ ಕುಡಿಯುವ ನೀರು ಕೊಡುವ ಉದ್ದೇಶ ಅಧಿಕಾರಿಗಳು, ಗುತ್ತಿಗೆದಾರರಿಗೆ ಇಲ್ಲ. ಕಳಪೆ ಕಾಮಗಾರಿ ನಡೆಸಿ ಬಿಲ್ ಪಡೆದಿದ್ದಾರೆ. ತಾಪಂ ಇಒ, ಜಿಪಂ ಸಿಇಒಗೆ ದೂರು ನೀಡಲಾಗಿದೆ. ಲೋಕಾಯುಕ್ತಕ್ಕೆ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿ ದೂರು ನೀಡುತ್ತೇವೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ನಾಗೇಶ್ ಅಮೀನ್ ಮಾತನಾಡಿ, ಕಾಮಗಾರಿಗೆ ಬಳಸಿರುವ ಪೈಪ್ ಕಳಪೆಯಾಗಿದ್ದು, ಕಾಮಗಾರಿಯೂ ಸರಿಯಾಗಿ ನಡೆದಿಲ್ಲ. ಇಂಜಿನಿಯರ್‌ಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಹೇರೂರು ಗ್ರಾಪಂ ಒಂದರಲ್ಲಿಯೇ 9 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದ್ದರೂ ಒಂದೇ ಒಂದು ಮನೆಗೂ ನೀರು ಬರುತ್ತಿಲ್ಲ. ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಡುಗಾರು, ಕಿಬ್ಳಿ, ಸುಂಕದಗದ್ದೆ, ವೀರಗಲ್ಲುಮಕ್ಕಿ, ಹುತ್ತಿನಗದ್ದೆ, ಸೀಗೋಡು, ಶಾಂತಿಪುರ, ಸ್ಥೀರೂರು ಭಾಗಗಳಲ್ಲಿನ ಕಾಮಗಾರಿ ಕಳಪೆಯಾಗಿದ್ದರ ಬಗ್ಗೆ ಗ್ರಾಮಸ್ಥರು ದೂರಿದರು. ಕಾಮಗಾರಿಯ ಬಹುತೇಕ ಹಣವನ್ನು ಗುತ್ತಿಗೆದಾರರು ಪಡೆದಿದ್ದು, ಯಾವ ಮನೆಗೂ ನೀರು ಬರುತ್ತಿಲ್ಲ. ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದರೂ ಅಕ್ರಮವಾಗಿ ಅಧಿಕಾರಿಗಳು ಬಿಲ್ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರ ದೂರು ಆಲಿಸಿದ ಕೊಪ್ಪ ತಾಪಂ ಇಒ ನವೀನ್‌ಕುಮಾರ್ ಮಾತನಾಡಿ, ಗ್ರಾಪಂ ಗಮನಕ್ಕೆ ತರದೆ ಕಾಮಗಾರಿಯ ಎಸ್ಟಿಮೇಟ್ ಹಾಗೂ ಕೆಲಸ ಮಾಡಿರುವುದು ಹಾಗೂ ನೀರಿನ ಲಭ್ಯತೆ ಇಲ್ಲದೆಡೆ ಕಾಮಗಾರಿ ನಡೆಸಿರುವುದು ನಿಯಮಬಾಹಿರ. ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಮನೆಗಳಿಗೆ ನೀರು ಬಾರದೆ ಉಳಿದ ಹಣ ಬಿಡುಗಡೆ ಮಾಡದಂತೆ ಸೂಚಿಸಲಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇಇ ವೆಂಕಟೇಶ್ ಮಾತನಾಡಿ, ಕಾಮಗಾರಿಯಲ್ಲಾದ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಹಾಗೂ ಪೈಪ್‌ಗಳನ್ನು ಇನ್ನೊಮ್ಮೆ ಗುಣಮಟ್ಟ ಪರೀಕ್ಷೆಗೆ ಕಳುಹಿಸುತ್ತೇವೆ ಎಂದು ತಿಳಿಸಿದರು. ನಂತರ ತಾಪಂ ಇಒ ನವೀನ್‌ಕುಮಾರ್, ಇಇಇ ವೆಂಕಟೇಶ್, ಗ್ರಾಪಂ ಅಧ್ಯಕ್ಷ ಅಶ್ವತ್ಥ್, ಕುಕ್ಕುಡಿಗೆ ರವೀಂದ್ರ ಇತರರು ಕಾಮಗಾರಿ ಸ್ಥಳ ಪರಿಶೀಲಿಸಿದರು. ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆಯಾಗಿದ್ದು, ಅವೈಜ್ಞಾನಿಕವಾಗಿರುವುದು, ಯಾವ ಮನೆಗೂ ನೀರು ಬಾರದಿರುವುದು ತಿಳಿಯಿತು.