ಜಿಲ್ಲೆ

ಹೇಮೆ 2 ತಿಂಗಳ ಹಿಂದೆಯೇ ಜಲಾಶಯ ಭರ್ತಿಯಾದರೂ ನಡೆಯದ ಸಾಂಪ್ರದಾಯಕ ಕಾರ್ಯ

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಎರಡು ತಿಂಗಳ ಹಿಂದೆಯೇ ಭರ್ತಿಯಾಗಿದ್ದರೂ ಸಾಂಪ್ರದಾಯಕವಾಗಿ ಸಲ್ಲಬೇಕಿರುವ ಬಾಗಿನ ಸಮರ್ಪಣೆ ಇನ್ನೂ ಆಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಬಾಗಿನ ಸಮರ್ಪಣೆ ಮಾಡಿಸಲು ಜಿಲ್ಲಾಡಳಿತ ಮನವಿ ಮಾಡಿದ್ದು ಮುಖ್ಯಮಂತ್ರಿಗಳು ಸಮಯ ನಿಗದಿಯಾಗದ ಕಾರಣ ಬಾಗಿನ ಅರ್ಪಿಸಿಲ್ಲ.
ಪ್ರಸ್ತುತ ವರ್ಷದ ಮುಂಗಾರು ಉತ್ತಮವಾಗಿ ಸುರಿದು ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ, ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಹಾಗೂ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕೃಷ್ಣೆ ಜಲಾಶಯಕ್ಕೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದ್ದಾರೆ. ಆದರೆ ನಾಲ್ಕು ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಹೇಮಾವತಿ ಜಲಾಶಯಕ್ಕೆ ಮಾತ್ರ ಇನ್ನು ಬಾಗಿನ ಅರ್ಪಿಸದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.
ಐದು ವರ್ಷದ ನಂತರ ತುಂಬಿದ ಡ್ಯಾಂ
ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯಕ್ಕೆ ಕಳೆದ ಐದು ವರ್ಷಗಳ ಹಿಂದೆ 2019ರಲ್ಲಿ ಬಾಗಿನ ಬಿಡಲಾಗಿತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋಪಾಲಯ್ಯ ಅವರು ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಅದಾಗ ಬಳಿಕ 2024ರ ಜುಲೈ ತಿಂಗಳಿನಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಉತ್ತಮ ಮಳೆಯಾಗುತ್ತಿರುವ ಕಾರಣ ಈಗಲೂ ಡ್ಯಾಂಗೆ ಸರಾಸರಿ ಹತ್ತು ಸಾವಿರ ಒಳಹರಿವಿನ ಪ್ರಮಾಣವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪ್ರಸ್ತುತ ದಿನದ ಡ್ಯಾಂನಲ್ಲಿ 36.958 ಟಿಎಂಸಿ ನೀರು ಸಂಗ್ರಹವಾಗಿದೆ.

7,89,520 ಎಕರೆಗೆ ನೀರಾವರಿ:
ಹೇಮಾವತಿ ಜಲಾಶಯ ಒಟ್ಟು 7,89,520 ಎಕರೆಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ಪೈಕಿ ಹಾಸನ ಜಿಲ್ಲೆಯ 1,55,030 ಎಕರೆ, ತುಮಕೂರು ಜಿಲ್ಲೆಯ 3,17,672 ಎಕರೆ, ಮಂಡ್ಯ ಜಿಲ್ಲೆಯ 2,30,885 ಎಕರೆ ಹಾಗೂ ಮೈಸೂರು ಜಿಲ್ಲೆಯ 5,665 ಎಕರೆಗೆ ನೀರಾವರಿ ಒದಗಿಸುತ್ತದೆ. ನೀರಾವರಿ ಕ್ಷೇತ್ರದ ಜತೆಗೆ ಗೊರೂರು ಜಲಾಶಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಜಲಾಶಯಕ್ಕೆ ಪ್ರವಾಸಿಗರು ಲಗ್ಗೆ:
ಈ ಬಾರಿ ಉತ್ತಮ ಮಳೆಯಾದ ಕಾರಣ ಜುಲೈ ತಿಂಗಳಿನಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚಿದ್ದ ಕಾರಣ ಜಲಾಶಯದಿಂದ ಈ ವರ್ಷ ಆರು ಗೇಟ್‌ಗಳನ್ನು ತೆರೆಯಲಾಗಿತ್ತು. ಈ ವರ್ಷ ಅಂದಾಜು ಒಂದು ಲಕ್ಷ ಕ್ಯುಸೆಕ್ ನೀರನ್ನು ಒಂದು ದಿನದಲ್ಲಿ ಹರಿಸಲಾಗಿತ್ತು. ಸುಮಾರು 50 ಅಡಿ ಎತ್ತರದಿಂದ ಆರು ಗೇಟ್‌ಗಳಿಂದ ಕೆಳಗೆ ರಭಸವಾಗಿ ಕೆಳಗೆ ಬೀಳುವ ನೀರು ನೂರು ಅಡಿ ಎತ್ತರಕ್ಕೆ ಮೇಲೆ ಚಿಮ್ಮುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಒಂದು ತಿಂಗಳಿನಿಂದಲೂ ನೀರನ್ನು ಬಿಡುತ್ತಿರುವ ಕಾರಣ ಜಲಾಶಯ ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಹೆಣ್ಣುಮಕ್ಕಳಿಗೆ ಶ್ರೇಷ್ಠ ಹಬ್ಬ:
ಗಂಡನ ಮನೆಯಲ್ಲಿರುವ ಮನೆ ಮಗಳಿಗೆ ಗೌರಿ ಹಬ್ಬದ ದಿನದಂದು ತವರು ಮನೆಯಿಂದ ವಿವಿಧ ಧಾನ್ಯ, ಹಣ್ಣು ಸೇರಿದಂತೆ ಒಟ್ಟು 16 ಪದಾರ್ಥಗಳನ್ನು ಸಾಂಪ್ರದಾಯಿಕವಾಗಿ ನೀಡಲಾಗುತ್ತದೆ. ಇದು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅದೇ ರೀತಿ ಜಲಾಶಯಗಳು ಭರ್ತಿಯಾದಾಗ ಜನಪ್ರತಿನಿಧಿಗಳು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ವಾಡಿಕೆ ಇದೆ. ಅದರಂತೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಮುಖ್ಯಮಂತ್ರಿಗಳು, ಸಣ್ಣ-ಪುಟ್ಟ ಜಲಾಶಯಗಳಿಗೆ ಆಯಾ ಭಾಗದ ಜನಪ್ರತಿನಿಧಿಗಳು ಬಾಗಿನ ಅರ್ಪಿಸುತ್ತಾರೆ. ಅದರಂತೆ ಗ್ರಾಮಗಳಲ್ಲಿ ಕೆರೆ ತುಂಬಿದಾಗಲೂ ಗ್ರಾಮಸ್ಥರೆಲ್ಲರೂ ಸೇರಿ ಕೆರೆಗೆ ಬಾಗಿನ ಅರ್ಪಿಸುವ ಸಂಪ್ರದಾಯ ನಮ್ಮಲ್ಲಿದೆ ಇದೆ.