ಹಾಸನ: ಮುಡಾ ಹಗರಣದ ವಿಚಾರವಾಗಿ ಹೆಚ್ಚು ವಿಚಾರಣೆ ನಡೆಯುತ್ತಿದ್ದು, ಅದಕ್ಕಿಂತ ಬ್ರಹ್ಮಾಂಡ ಭ್ರಷ್ಟಾಚಾರದಂತಹ ಹಗರಣ ನಮ್ಮ ಜಿಲ್ಲೆಯಲ್ಲಿಯೂ ನಡೆದಿದೆ. ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಮುಳುಗಡೆ ಸಂತ್ರಸ್ತರ ಹೆಸರಿಗೆ ಜಮೀನು ಮಂಜೂರಾಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪು ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಬಿ. ಶಿವರಾಂ ಒತ್ತಾಯಿಸಿದರು.
ಹಾಸನ ಜಿಲ್ಲೆಯಲ್ಲಿ ಹೇಮಾವತಿ ಜಲಾನಯನ ಯೋಜನೆಗಾಗಿ ಒಟ್ಟು 172 ಗ್ರಾಮಗಳ 21,008.20 ಎಕರೆ ಪ್ರದೇಶ ಮುಳುಗಡೆಯಾಗಿದೆ. ಆದರೆ ಈವರೆಗೆ ಭೂಮಿ ಕಳೆದುಕೊಂಡ ಯಾರೊಬ್ಬ ವ್ಯಕ್ತಿಗೂ ಭೂಮಿ ಮಂಜೂರಾತಿ ಆಗಿಲ್ಲ. ಕೂಡಲೇ ನಿಗದಿತ ಅವಧಿಯ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಭೂ ಮಂಜೂರಾತಿ ಆಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು
2005 ರಿಂದ 1265 ಪ್ರಕರಣಗಳಲ್ಲಿ ನಾನಾ ಕಾರಭಣಗಳಿಗೆ ವಿಚಾರಣೆ ನಡೆಸಿ ಖಾತೆ ರದ್ದು ಪಡಿಸಿ ಸರಕಾರದ ಹೆಸರಿಗೆ ಇಡಲಾಗಿದೆ ಎಂದರು. ಇದರಲ್ಲಿ ಸರ್ಟಿಫಿಕೆಟ್ ಬೋಗಸ್ ಆಗಿದೆ. ಪಾಣಿ ರದ್ದಾಗಿದೆ. ಸಿಓಡಿ ತನಿಖೆ ಇನ್ನು ನಡೆಯುತ್ತಿದೆ ಎಂದು ಸಬೂಬು ಹೇಳಿಕೊಂಡು ಬರಲಾಗುತ್ತಿದೆ. ಜಲಾನಯನ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ ಸರಿಯಲ್ಲ. ಈಗಾಗಲೇ ಈ ವಿಚಾರದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು ಸರ್ಕಾರದ ಗಮನಕ್ಕೂ ಹೋಗಿದೆ. ಈ ಹಿಂದೆ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತನಿಖೆ ಸಂಸ್ಥೆಗಳೇ ಆದೇಶ ನೀಡಿದ್ದರೂ ಈವರೆಗೂ ಯಾರೊಬ್ಬರ ಮೇಲೆಯೂ ಕ್ರಮ ಜರುಗಿಸಿಲ್ಲ ಎಂದರು.
ಸರ್ಕಾರದ ನಿಯಮಾನುಸಾರ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ನೀಡಿ, ಅವರಿಗೆ ಬದುಕಲು ಅವಕಾಶ ಕೊಡಬೇಕು. ಇನ್ನು ಕೆಲವರಿಗೆ ಭೂಮಿ ಸಿಕ್ಕರು ಅವರ ಹೆಸರಿಗೆ ಮಂಜೂರು ಮಾಡಿಕೊಡಲು ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಕೂಡಲೇ ಸಂಬಂಧಪಟ್ಟ ಸಚಿವರು ಈ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ಪರಿಹಾರ ವಿಳಂಬ ಕುರಿತು ಕಾಲುವೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಗಮನ ಸೆಳೆದು ಮೊದಲು ಪರಿಹಾರ ಕೊಡಿಸಿ ನಂತರ ಡ್ಯಾಮೇಜು ಹಣ ಕೂಡ ಕೊಡಿಸಲಾಗುವುದು. ಸ್ಥಳಕ್ಕೆ ಹೋಗಿ ಈ ವಿಚಾರವನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದರು.