ಜಿಲ್ಲೆ

ಹೇಮಾವತಿ ಬಲದಂಡ ನಾಲೆ ಏರಿ ಒಡೆದು ಅಪಾರ ಬೆಳೆಹಾನಿ


ಹೊಳೆನರಸೀಪುರ: ಹೇಮಾವತಿ ಬಲದಂಡೆ ನಾಲೆಯ ಏರಿ ಒಡೆದು ಬಂಟರತಳಾಲು ಗ್ರಾಮದ ರೈತರ ನೂರಾರು ಎಕರೆ ಅಡಕೆ, ಬಾಳೆ ಇನ್ನಿತರ ಬೆಳೆಗಳು ಕೊಚ್ಚಿಹೋಗಿ ಅಪಾರ ನಷ್ಟವುಂಟಾಗಿದೆ.


ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಶ್ರವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಂಟರತಳಾಲು ಅರೇಹಳ್ಳಿ ಮಾರ್ಗವಾಗಿ ಹೋಗುವ 41ನೇ ಗೇಟ್‌ನ ಬಲದಂಡೆ ನಾಲೆ ಏರಿ ಇತ್ತೀಚೆಗೆ ಒಡೆದ ಪರಿಣಾಮ ಬೆಳೆದು ನಿಂತಿದ್ದ ಅಡಕೆ, ಬಾಳೆತೋಟ ಹಾಳಾಗಿವೆ.


ನಾಲೆ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ ಸ್ಥಳಕ್ಕೆ ಹೇಮಾವತಿ ಬಲದಂಡೆ ನಾಲಾ ವಿಭಾಗದ ಅಧಿಕಾರಿಗಳು ಭೇಟಿ ನೀಡಿಲ್ಲ, ತುರ್ತು ಕಾಮಗಾರಿ ಕೈಗೊಂಡು ಒಡೆದ ಏರಿಯನ್ನು ದುರಸ್ತಿ ಮಾಡಿಲ್ಲ, ಇದರಿಂದ ಅಡಕೆ, ಬಾಳೆ ಹಾಗೂ ಇತರ ಬೆಳೆಗಳು ಮಣ್ಣು ಪಾಲಾಗಿವೆ. ನಮಗಾಗಿರುವ ನಷ್ಟವನ್ನು ಇಲಾಖೆಯೇ ಭರಿಸಬೇಕು ಎಂದು ರೈತರು ದೂರಿದ್ದಾರೆ.


ಹೇಮಾವತಿ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಪೂರ್ಣವಾಗಿಲ್ಲ. ಅಲ್ಲಲ್ಲಿ ತುಂಡು ಗುತ್ತಿಗೆ ಕಾಮಗಾರಿಯನ್ನು ನೀಡಿ ಗುಣಮಟ್ಟದ ಕಾಮಗಾರಿ ನಡೆಸದೆ ಭ್ರಷ್ಟಾಚಾರ ಎಸೆಗಿದ್ದಾರೆ. ನಾಲೆಯ ಕಾಂಕ್ರೀಟ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಗೊರೂರಿನಿಂದ ದೊಡ್ಡಕಾಡನೂರುವರೆಗೆ 92 ಕಿ.ಮೀ. ಕೂಡಿರುವ ಈ ನಾಲೆ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು, ಅಧಿಕಾರಿಗಳು, ಗುತ್ತಿಗೆದಾರ ರೈತರ ತೆರಿಗೆ ದುಡ್ಡನ್ನು ಲೂಟಿ ಮಾಡಿದ್ದಾರೆ. ಕಳಪೆ ಕಾಮಗಾರಿಗೆ ಕಾರಣರಾದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಲೆ ಒಡೆದು ಹೋಗಿದ್ದರೂ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ, ನಷ್ಟ ಹೊಂದಿರುವ ರೈತರಿಗೆ ಪಾರ ನಷ್ಟವಾಗಿದ್ದು, ಅದನ್ನು ಇಲಾಖೆಯವರೇ ತುಂಬಿಕೊಡಬೇಕು. ಇಲ್ಲವಾದರೆ ನೀರಾವರಿ ಇಲಾಖೆ ಮುಂದೆ ಬಿಜೆಪಿ ಮುಖಂಡರು ಮತ್ತು ರೈತರು ಧರಣಿ ಕೂರುತ್ತೇವೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಣ್ಣ ಎಚ್ಚರಿಸಿದ್ದಾರೆ.