ಜಿಲ್ಲೆ

ಹೇಮಾವತಿ ನೀರು ಸಮಾನ ವಿತರಣೆ

ತಾಂತ್ರಿಕ ವರದಿ ಅಭಯ, ಕುಣಿಗಲ್​ ಲಿಂಕ್​ ಕೆನಾಲ್​ ಯೋಜನೆಗೆ ನೀರು ಖಾತರಿ

ಬೆಂಗಳೂರು: ಹೇಮಾವತಿ ನೀರಿಗಾಗಿ ತುಮಕೂರು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ, ಕುಣಿಗಲ್​ ಲಿಂಕ್​ ಕಾಲುವೆ ವಿರೋಧಿ ಚಳವಳಿ ಶಮನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದೇ ಕಾಲಕ್ಕೆ ಮಾಗಡಿ, ಕುಣಿಗಲ್​ ತಾಲೂಕುಗಳಿಗೆ "ಶ್ರೀರಂಗ ಕುಡಿಯುವ ನೀರು ಪೂರೈಕೆ ಯೋಜನೆ (ಕುಣಿಗಲ್​ ಲಿಂಕ್​ ಕೆನಾಲ್​)'ಗೆ ನೀರು ಪೂರೈಕೆಯನ್ನೂ ಖಾತರಿಪಡಿಸಿದೆ.
ಅಲ್ಲದೆ, ತುಮಕೂರು ಶಾಖಾ ಕಾಲುವೆ ಅವಲಂಬಿತ ಅಚ್ಚುಕಟ್ಟು ಪ್ರದೇಶ, ಕುಡಿಯುವ ನೀರು ಪೂರೈಕೆ ಯೋಜನೆಗೆ ಹಂಚಿಕೆಯಾದಷ್ಟೇ ನೀರು ಪೂರೈಕೆ ಆಗಲಿದೆ ಎಂದು ಅರವಿಂದ ಡಿ.ಕಣಗಿಲೆ ಅಧ್ಯಕ್ಷತೆಯ ನಾಲ್ವರು ಸದಸ್ಯರು, ಸದಸ್ಯ ಕಾರ್ಯದರ್ಶಿ ಒಳಗೊಂಡ ತಾಂತ್ರಿಕ ಸಮಿತಿ ವರದಿ ಭರವಸೆ ನೀಡಿದೆ. ಹೇಮಾವತಿ ನೀರು ಹಂಚಿಕೆಯಂತೆ ಎಲ್ಲ ಭಾಗಕ್ಕೂ ಸಮಾನ ವಿತರಣೆ, ಕೊನೇ ಭಾಗ ಕುಣಿಗಲ್​ ತಾಲೂಕಿಗೆ ನ್ಯಾಯ ಒದಗಿಸುವುದು ಲಿಂಕ್​ ಕಾಲುವೆ ಮುಖ್ಯ ಉದ್ದೇಶ ಎಂದು ವರದಿ ಸ್ಪಷ್ಟಪಡಿಸಿದೆ.

ಹಂಚಿಕೆಯಾದಷ್ಟೇ ನೀರು ಬಳಕೆ:

ಕುಣಿಗಲ್​ ತಾಲೂಕಿಗೆ ಹಂಚಿಕೆಯಾದ ನೀರಿನ ಪಾಲನ್ನು ಲಿಂಕ್​ ಕಾಲುವೆ ಬಳಸಿಕೊಂಡು ಕೊನೇ ಭಾಗಕ್ಕೆ ಹರಿಸುತ್ತಿದ್ದು, ಹೆಚ್ಚುವರಿ ನೀರೆತ್ತುತ್ತಿಲ್ಲ. ತುಮಕೂರಿಗೆ ಹಂಚಿಕೆಯಾದ 19.95 ಟಿಎಂಸಿ ಅಡಿ ನೀರು ಪೂರೈಕೆ ಖಚಿತ ಎಂದು ಕೆ.ಜೈಪ್ರಕಾಶ್​ ಸ್ಪಷ್ಟ ಪಡಿಸಿದರು.

ಸಂಶಯ ಬೇಡ:

ಕಾವೇರಿ ನಿಗಮದ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್​, ತಾಂತ್ರಿಕ ವರದಿಯ ಪ್ರಮುಖಾಂಶ ಬಿಡುಗಡೆ ಮಾಡಿ ಮಾತನಾಡಿದ ಅವರು, ಡಿಸಿಎಂ ಸಲಹೆಯಂತೆ "ಶ್ರೀರಂಗ ಕುಡಿಯುವ ನೀರು ಪೂರೈಕೆ ಯೋಜನೆ' (ಕುಣಿಗಲ್​ ಲಿಂಕ್​ ಕಾಲುವೆ) ವಸ್ತುಸ್ಥಿತಿ ಜನರ ಮುಂದಿಡಲಾಗುತ್ತಿದೆ. ಈ ಯೋಜನೆ ಬಗ್ಗೆ ತುರುವೇಕೆರೆ, ಗುಬ್ಬಿ, ತುಮಕೂರು ತಾಲೂಕುಗಳ ಜನರಿಗೆ ಅಪನಂಬಿಕೆ, ಸಂಶಯ ಬೇಡ. ರಾಷ್ಟ್ರೀಯ ಜಲನೀತಿ ಪ್ರಕಾರ ಕುಡಿಯುವ ನೀರು ಪೂರೈಕೆಗೆ ವಿರೋಧ, ಅಡ್ಡಿಗೆ ಅವಕಾಶಗಳೇ ಇಲ್ಲ ಎಂದರು.

ಯೋಜನೆ ಅಗತ್ಯ:

ತುಮಕೂರು ಶಾಖಾ ಕಾಲುವೆ 228 ಕಿಮೀ ಉದ್ದವಿದೆ. ಆದರೆ 167 ಕಿಮೀ ನಂತರ ಈವರೆಗೆ ಸರಿಯಾಗಿ ನೀರು ಹರಿದಿಲ್ಲ, ಕೊನೇ ಭಾಗವಾದ ಕುಣಿಗಲ್​ ತಾಲೂಕು ಹಂಚಿಕೆ ನೀರಿನಿಂದ ವಂಚಿತ ಆಗುತ್ತಲೇ ಇದೆ. ಶಾಖಾ ಕಾಲುವೆಯ 167 ಕಿಮೀ ಬಳಿಕ 3.676 ಟಿಎಂಸಿ ಅಡಿ ನೀರು ಹರಿಯಬೇಕು. ವಾಸ್ತವದಲ್ಲಿ ನೀರಿನ ಸರಾಸರಿ ಪ್ರಮಾಣವು ನಿಗದಿಪಡಿಸಿದ್ದಕ್ಕಿಂತ ಕಡಿಮೆ ಹರಿದಿದೆ. ಒಂದು ದಶಕದ ಲೆಕ್ಕ ತೆಗೆದುಕೊಂಡರೆ 2020&21ರಲ್ಲಿ 0.4486 ಟಿಎಂಸಿ ಅಡಿ ನೀರು ಗರಿಷ್ಠ. ಅದೊಂದು ವರ್ಷ ಬಿಟ್ಟರೆ 2023&24ರವರೆಗೆ ಸರಾಸರಿ 0.210 ಟಿಎಂಸಿ ಅಡಿ (ಶೇ.10) ನೀರಷ್ಟೇ ಕೊಡಲು ಶಕ್ತವಾಗಿದೆ ಎಂದು ಕೆ.ಜೈಪ್ರಕಾಶ್​ ವಿವರಿಸಿದರು.ಕಾಲುವೆಯ ಮೇಲ್ಭಾಗದಲ್ಲಿ ಹೆಚ್ಚಿನ ನೀರು ಬಳಕೆ, ಅನಧಿಕೃತ ನೀರಾವರಿ, ಅಧಿಸೂಚಿತ ಬೆಳೆ ಬಿಟ್ಟು ಹೆಚ್ಚು ನೀರು ಬೇಡುವ ಬೆಳೆ ಇತ್ಯಾದಿ ಕಾರಣಗಳಿಂದ ಕೊನೇ ಭಾಗ ವಂಚಿತವಾಗಿದೆ. ಲಿಂಕ್​ ಕಾಲುವೆ ನಿರ್ಮಾಣದಿಂದ ಯಾವುದೇ ಭಾಗಕ್ಕೂ ಸಮಸ್ಯೆಯಾಗದು ಎಂದು ಕೆ.ಜೈಪ್ರಕಾಶ್​ ಪುನರುಚ್ಚರಿಸಿದರು.