ಜಿಲ್ಲೆ

ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸಿ

ಚಿಕ್ಕನಾಯಕನಹಳ್ಳಿ: ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸಿ ತಾಲೂಕಿನ 26 ಕೆರೆಗಳಿಗೂ ನೀರು ಹರಿಸುವಂತೆ ಒತ್ತಾಯಿಸಿ ನ.4ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ತಾಲೂಕಿನ ರೈತರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಅಂಬೇಡ್ಕರ್​ ನಗರದಲ್ಲಿನ ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ, ಬಳಿಕ ನೆಹರು ಸರ್ಕಲ್​ನಲ್ಲಿ ಮಾನವ ಸರಪಳಿ ನಿರ್ಮಾಣ ಹಾಗೂ ರಸ್ತೆ ತಡೆ, ಅಲ್ಲಿಂದ ತಾಲೂಕು ಆಡಳಿತ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರೈತ ಹೋರಾಟ ಸಮಿತಿ ತಿಳಿಸಿದೆ.

ಈ ವೇಳೆ ರೈತ ಮುಖಂಡ ಮಧು ಮಾತನಾಡಿ, ತಾಲೂಕಿನ 26 ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ನೀರಾವರಿ ಯೋಜನೆಯು ಕಳೆದ 13 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಇದರಿಂದ ನೀರಾವರಿ ಸೌಲಭ್ಯವಿಲ್ಲದೆ ತಾಲೂಕಿನ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅಲ್ಲದೇ ನೀರಾವರಿ ಇಲ್ಲದೆ ತೆಂಗಿನ ಪ್ರತಿ ಮರದ ವಾರ್ಷಿಕ ಸರಾಸರಿ ಇಳುವರಿ ಕಳೆದ 15ವರ್ಷಗಳಲ್ಲಿ ಹಂತ ಹಂತವಾಗಿ 250 ತೆಂಗಿನ ಕಾಯಿಗಳಿಂದ 39 ತೆಂಗಿನ ಕಾಯಿಗಳಿಗೆ ಕುಸಿದಿದೆ. ಅಲ್ಲದೇ ತಾಲೂಕಿನ ಕೆರೆಗಳು ಅಸಮರ್ಪಕ ಮಳೆಯಿಂದ ಸಂಪೂರ್ಣ ಭರ್ತಿಯಾಗದ ಕಾರಣ ಈ ಭಾಗದ ಅಂತರ್ಜಲಮಟ್ಟ ಕುಸಿತ ಕಂಡಿದ್ದು, ಬೋರ್​ವೆಲ್​ಗಳು ಬತ್ತಿ ಹೋಗುತ್ತಿದ್ದು, ರೈತರು ಆಘಾತಕ್ಕೊಳಗಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ನವಿಲೆ ಕೆರೆ ಸೇರಿ 26 ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿಪೂರ್ಣಗೊಳಿಸಬೇಕು ಎಂದರು.