ಜಿಲ್ಲೆ

ಹೇಮಾವತಿ ಜಲಾಶಯ ಸಂತ್ರಸ್ತರ ಪ್ರತಿಭಟನೆ

Hassan

ಅರಕಲಗೂಡು: ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಜಮೀನು ದಾಖಲೆಗಳನ್ನು ನೀಡದೆ ವಂಚಿಸಲಾಗಿದೆ ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಎಸ್.ಕೃಷ್ಣ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಶುಕ್ರವಾರ ಹೇಮಾವತಿ ಸಂತ್ರಸ್ತ ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, 1972ರಲ್ಲಿ ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿ ಬಂದ ರೈತರಿಗೆ ಭೂಮಿಯ ಒಡೆತನದ ಹಕ್ಕಿನ ದಾಖಲೆಗಳನ್ನು ನೀಡದೆ ಸರ್ಕಾರ ಹಾಗೂ ಕಂದಾಯ ಇಲಾಖೆ ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಜೂರಾದ ಭೂಮಿಗೆ ಸಾಗುವಳಿ ಚೀಟಿ ಹೊರತು ಜಮೀನನ್ನು ದುರಸ್ತಿ ಮಾಡಿ ಪೋಡಿ ಮಾಡಿಲ್ಲ. ಖಾತೆ ಮಾಡಿ ಪಹಣಿಗಳನ್ನು ನೀಡಿಲ್ಲ. ಇದರಿಂದ ಸರ್ಕಾರದ ಸವಲತ್ತು ಪಡೆದುಕೊಳ್ಳಲು ಸಾಧ್ಯವಿಲ್ಲ. ಜಮೀನು ನೀಡುವಾಗಲೆ ಅಗತ್ಯ ದಾಖಲೆಗಳನ್ನು ಮಾಡಿ ಕೊಡಲು 450 ರೂ. ಸರ್ಕಾರಿ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿದೆ. ಆದರೂ 5 ದಶಕಗಳಿಂದ ಭೂಮಿ ಒಡೆತನದ ದಾಖಲೆಗಳನ್ನು ನೀಡಲಾಗಿಲ್ಲ. ಜಿಲ್ಲೆಯಲ್ಲಿ ಇಂತಹ 10 ಸಾವಿರ ಕುಟುಂಬಗಳಿದ್ದು, ತಾಲೂಕಿನಲ್ಲಿ 6 ಸಾವಿರ ಪ್ರಕರಣಗಳಿವೆ. ಸರ್ಕಾರ ಹಾಗೂ ಇಲಾಖೆಯ ಬೇಜವಾಬ್ದಾರಿಯಿಂದ ರೈತರು ಅನುಭವಿಸಿರುವ ಸಂಕಷ್ಟಕ್ಕೆ ಸರ್ಕಾರ 1 ಲಕ್ಷ ರೂ. ಹಣವನ್ನು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೂಡಲೆ ಜಮೀನಿನ ದಾಖಲೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ನೀಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಹೇಮಾವತಿ ಜಲಾಶಯ ಯೋಜನೆಯಡಿ ನಡೆದಿರುವ ಅಕ್ರಮಗಳಿಗೆ ಕೊನೆ ಮೊದಲಿಲ್ಲ. ಹಣವಂತರು, ಬಲಾಢ್ಯರು ಸಂತ್ರಸ್ತ ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನುಂಗಿದ್ದಾರೆ. ಜಿಲ್ಲೆಯಲ್ಲಿ 8 ಸಾವಿರ ಎಕರೆ ಜಮೀನನ್ನು ಸಂತ್ರಸ್ತರ ಹೆಸರಿನಲ್ಲಿ ವಂಚಿಸಲಾಗಿದೆ ಎಂದ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಬಡ ರೈತರ ಹೆಸರಿನಲ್ಲಿ ನಡೆದಿರುವ ಇಂತಹ ವಂಚನೆ ಪ್ರಕರಣದ ಕುರಿತು ಧ್ವನಿ ಎತ್ತಬೇಕಿದೆ ಎಂದು ಹೇಳಿದರು.
ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದೇನೆ, ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಪೋಡಿ ಪ್ರಕರಣ ಬಾಕಿ ಇದೆ. 2015ರಿಂದ ಈಚೆಗೆ ಮಂಜೂರಾದ ಪ್ರಕರಣಗಳಿಗೆ ಪೋಡಿ ಮಾಡದಂತೆ ತಾತ್ಕಾಲಿಕ ತಡೆ ನೀಡಲಾಗಿದೆ. ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ನಿಜವಾದ ಫಲಾನುಭವಿಗಳಿಗೆ ಮಂಜೂರಾಗಿರುವ ಜಮೀನಿಗೆ ದಾಖಲೆಗಳನ್ನು ಮಾಡಿಕೊಡುವಂತೆ ಆಗ್ರಹಿಸಿದ್ದೇನೆ. ತಾಲೂಕಿನಲ್ಲಿ 85 ಸಂತ್ರಸ್ತರು ಅರ್ಜಿ ಸಲ್ಲಿಸಿದ್ದು, 5 ಜನರಿಗೆ ಪೋಡಿ ಮಾಡಲಾಗಿದೆ. ಉಳಿದ 80 ಪ್ರಕರಣಗಳು ಬಾಕಿ ಇವೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ. ಎಲ್ಲ ಅರ್ಹರನ್ನೂ ಗುರುತಿಸಿ ದಾಖಲೆಗಳನ್ನು ಸಿದ್ಧಪಡಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ತಹಸೀಲ್ದಾರ್ ಮೋಹನ್‌ಕುಮಾರ್ ಮಾತನಾಡಿ, ಮುಂದಿನ ವಾರದಿಂದ ಪ್ರತಿ ಹೋಬಳಿಯಲ್ಲಿ ಸಭೆ ನಡೆಸಿ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೋರಾಟ ಸಮಿತಿ ಮುಖಂಡರಾದ ಲೋಕೇಶ್, ಹೇಮುಪ್ರಸಾದ್, ಜೈರಾಮ್ ಚಂದ್ರಶೇಖರ್, ಕೃಷ್ಣೇಗೌಡ, ಬಸವರಾಜ್, ಧರ್ಮೇಗೌಡ, ಪುಟ್ಟೇಗೌಡ, ಮೂರ್ತಿ ಇತರರಿದ್ದರು. ಇದಕ್ಕೂ ಮುನ್ನ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಮೆರವಣಿಗೆ ನಡೆಸಲಾಯಿತು.