ಜಿಲ್ಲೆ

ಹೆಸ್ಕಾಂನೊಂದಿಗೆ ಐಐಐಟಿ ಒಡಂಬಡಿಕೆ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹಾಗೂ ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮಾಹಿತಿ ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು.

ಸಂಸ್ಥೆಯ ಧಾರವಾಡ ನಿರ್ದೇಶಕ ಡಾ. ಕವಿ ಮಹೇಶ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಪ್ರಾಮುಖ್ಯ ಹಾಗೂ ಅವಶ್ಯಕತೆಯ ಬಗ್ಗೆ ವಿವರಿಸಿದರು. ಧಾರವಾಡದ ರಿಜಿಸ್ಟ್ರಾರ್ ಡಾ. ಸಿ.ಬಿ. ಅಕ್ಕಿ ಮಾತನಾಡಿ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರೀತಿಯ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ ಮಾತನಾಡಿ, ವಿದ್ಯುತ್ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳುವಿಕೆಯ ಮಹತ್ವ ವಿವರಿಸಿದರು. ಪ್ರಮುಖವಾಗಿ ಬಿಲ್ಲಿಂಗ್, ಕಂದಾಯ ಸಂಗ್ರಹ ಮತ್ತು ಸಿಬ್ಬಂದಿ ವಿವರಗಳನ್ನು ಕಲೆ ಹಾಕುವಲ್ಲಿ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಗ್ರಾಹಕರ ಕುಂದು ಕೊರತೆಗಳ ನಿವಾರಣೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರಂತರವಾಗಿ ಹೆಸ್ಕಾಂ ಜೊತೆ ಕೈ ಜೋಡಿಸಬೇಕು ಮತ್ತು ನವೀನ ತಂತ್ರಜ್ಞಾನವನ್ನು ಹೆಸ್ಕಾಂ ಅಳವಡಿಸಿಕೊಳ್ಳುವಲ್ಲಿ ಸಹಾಯ ಹಸ್ತ ನೀಡಬೇಕು ಎಂದು ಕೋರಿದರು. ಹೆಸ್ಕಾಂ ವಲಯ ಕಚೇರಿ ಮುಖ್ಯ ಇಂಜಿನಿಯರ್ ರಮೇಶ ಬೆಂಡಿಗೇರಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಜಗದೀಶ ಬೆಳಗಲಿ ಅವರು ಹೆಸ್ಕಾಂ ಬಗ್ಗೆ ಪರಿಚಯ ನೀಡಿದರು.

ಹೆಸ್ಕಾಂ ಹಿರಿಯ ಅಧಿಕಾರಿಗಳಾದ ಪ್ರದೀಪ ಸವದತ್ತಿ, ವಿನಾಯಕ ಪಾಲನಕರ, ಡಾ. ಉಮಾ ಎಸ್., ಡಾ. ರಾಜೇಂದ್ರ ಹೆಗಡೆ, ಡಾ. ದೀಪಕ ಕೆ.ಟಿ., ಡಾ. ಪವನ ಕುಮಾರ ಸಿ., ಧಾರವಾಡ ಐಐಐಟಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್ ಚಂದ್ರ, ಹಿರಿಯ ಅಧಿಕಾರಿಗಳಾದ ವೃಷಭೇಂದ್ರಪ್ಪ, ಅನಿಲ ಡಿಸೋಜಾ ಹಾಗೂ ಇತರರು ಇದ್ದರು. ನಾಗರಾಜ ಕೂಬಳ್ಳಿ ಸ್ವಾಗತಿಸಿದರು. ಅಡಿವೆಪ್ಪ ಮೆಣಸಿನಕಾಯಿ ನಿರೂಪಿಸಿದರು. ಮಹಾದೇವ ಸುಣಗಾರ ವಂದಿಸಿದರು.