ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡುವಿನ ಕಿತ್ತಾಟದಲ್ಲಿ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸಫಾರ್ಮರ್)ವೊಂದು ಕಳೆದ 2 ವರ್ಷಗಳಿಂದ ಅನಾಥವಾಗಿದೆ. ಇದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಿಲ್ಲದೇ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ 1ನೇ ಹಂತ, 1ನೇ ಮುಖ್ಯ ರಸ್ತೆ (ಎಸ್ಬಿಐ ಎದುರುಗಡೆ)ಯಲ್ಲಿ ಇರುವ ಕೈಗಾರಿಕೆಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಕೆಗಾಗಿ ಅಳವಡಿಸಬೇಕಿದ್ದ 250 ಎಚ್ಪಿ ಪರಿವರ್ತಕವನ್ನು ಸೋನಾಲಿಕಾ ಇಂಜಿನಿಯರಿಂಗ್ ಕಂಪನಿಯಲ್ಲಿ ಇಡಲಾಗಿದೆ. ಪರಿವರ್ತಕ ಅಳವಡಿಸಲು ಕಂಬ ನಿಲ್ಲಿಸಲಾಗಿದೆ. ಆದರೆ, ಕೆಲಸ ಮಾತ್ರ ಆಗಿಲ್ಲ. ಹೆಸ್ಕಾಂ ಹಾಗೂ ಕೆಐಎಡಿಬಿ ‘ಇದು ನಿಮ್ಮ ಕೆಲಸ...ನಮ್ಮದಲ್ಲ’ ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.
ಐದಾರು ಪ್ರಮುಖ ಉದ್ಯಮಗಳಿಗೆ ಪರಿವರ್ತಕ ಅಗತ್ಯವಿದೆ. ಈಗಿರುವ ಪರಿವರ್ತಕ ನಿಗದಿತ ಲೋಡ್ ತೆಗೆದುಕೊಳ್ಳುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ ನಿತ್ಯ ಒಂದಲ್ಲ ಒಂದು ಸಲ ಉತ್ಪಾದನೆ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ವಣವಾಗಿರುತ್ತವೆ.
ಇದಕ್ಕೆ ಇನ್ನೊಂದು ವಿದ್ಯುತ್ ಪರಿವರ್ತಕ ಅಳವಡಿಸುವುದೇ ಪರಿಹಾರವಾಗಿತ್ತು. ಇದಕ್ಕೆ ಹೆಸ್ಕಾಂ ನಿರ್ಧಾರವು ಕೈಗೊಂಡಿತ್ತು. ಅದರಂತೆ ಪರಿವರ್ತಕ ಕೂಡ್ರಿಸಲು ವಿದ್ಯುತ್ ಕಂಬ ಅಳವಡಿಸಲಾಗಿದೆ. ಪರಿವರ್ತಕ ತರಿಸಲಾಗಿತ್ತು. ಆದರೆ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಹಂತದಲ್ಲಿ ನಿರ್ಧಾರ ಬದಲಾಗಿದೆ. ಕೆಐಎಡಿಬಿಯವರು ವೆಚ್ಚ ನೀಡಿದರೆ ಮಾತ್ರ ಪರಿವರ್ತಕ ಅಳವಡಿಸುವ ನಿರ್ಧಾರಕ್ಕೆ ಹೆಸ್ಕಾಂ ಬಂದಿದೆ. ಹಾಗಾಗಿ ಕೆಲಸ ಅಲ್ಲಿಗೆ ನಿಂತಿದೆ. ಲಕ್ಷಾಂತರ ರೂ. ವೆಚ್ಚದ ಪರಿವರ್ತಕ ಖಾಸಗಿ ಕಂಪನಿಯವರಲ್ಲಿ ಧೂಳು ತಿನ್ನುತ್ತ ಬಿದ್ದಿದೆ.
ಇಲ್ಲಿಯ 4-5 ಕಂಪನಿಗಳು ಮಾಸಿಕ 5ರಿಂದ 6 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸುತ್ತಿವೆ. ಆದರೂ ವಿದ್ಯುತ್ ಸಮಸ್ಯೆ ಸಿಕ್ಕಾಪಟ್ಟೆ ಇದೆ. ಹೆಚ್ಚುವರಿ ಪರಿವರ್ತಕ ತಂದರೂ ಅಳವಡಿಸದೇ ಹೆಚ್ಚು ಕಡಿಮೆ 2 ವರ್ಷಗಳಾಗಿವೆ. ಇದೀಗ ಕೆಐಎಡಿಬಿಯವರ ಕೆಲಸ ಎಂದು ಹೆಸ್ಕಾಂನವರು ಹೇಳುತ್ತಿದ್ದಾರೆ. ಪದೇ ಪದೆ ವಿದ್ಯುತ್ ವ್ಯತ್ಯಯದಿಂದ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದೇವೆ. --ಸಂತೋಷ ಕಾಟವೆ, ಕಾರ್ಯದರ್ಶಿ ಎಸ್ಎಸ್ಕೆ ಕೈಗಾರಿಕೆಗಳ ಸಂಘ
ವಿದ್ಯುತ್ ಪರಿವರ್ತಕ ಹಾಗೂ ಅಳವಡಿಕೆಯ ವೆಚ್ಚ ನೀಡುವುದಾಗಿ ಕೆಐಎಡಿಬಿಯವರು ಒಪ್ಪಿಕೊಂಡಿದ್ದಾರೆ. ಅವರು ವೆಚ್ಚ ನೀಡಿದ ಬಳಿಕ ಪರಿವರ್ತಕ ಅಳವಡಿಸಲಾಗುವುದು. -ವಿಶ್ವನಾಥ ಶಿರಹಟ್ಟಿಮಠ, ಎಐಐ ಹೆಸ್ಕಾಂ
ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ 1ನೇ ಹಂತ, 1ನೇ ಮುಖ್ಯ ರಸ್ತೆಯಲ್ಲಿರುವ ಕೈಗಾರಿಕೆಗಳಿಗೆ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ ಅಳವಡಿಸಲು ನಾವು ವೆಚ್ಚ ನೀಡುವ ಪ್ರಶ್ನೆಯೇ ಇಲ್ಲ. ಅದು ಹೆಸ್ಕಾಂಗೆ ಬಿಟ್ಟಿದ್ದು. ಮನೋಹರ್ ವಡ್ಡರ್, ಅಭಿವೃದ್ಧಿ ಅಧಿಕಾರಿ ಕೆಐಎಡಿಬಿ