ಬಸವರಾಜ ಇದ್ಲಿ ಹುಬ್ಬಳ್ಳಿ
ಮುಂಗಾರಿನ ಮೊದಲ ಬೆಳೆ ರೈತನ ಕೈ ಸೇರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಟ ಶುರುವಾಗಿದೆ. ಹೆಸರುಕಾಳು ಎಪಿಎಂಸಿಗೆ ಬರುತ್ತಿದ್ದಂತೆ ವ್ಯಾಪಾರಸ್ಥರು ಎಂದಿನಂತೆ ಬೆಲೆ ಇಳಿಸಿದ್ದಾರೆ. ಕಳೆದ ವಾರವಷ್ಟೇ 7-8 ಸಾವಿರ ರೂ.ಗೆ ಕ್ವಿಂಟಾಲ್ನಂತೆ ಮಾರಾಟವಾಗುತ್ತಿದ್ದ ಹೆಸರುಕಾಳು ಈಗ ದಿಢೀರ್ ಕುಸಿತ ಕಂಡಿದ್ದು, ಕೇವಲ 3 ಸಾವಿರ ರೂ.ಗೆ ಕ್ವಿಂಟಾಲ್ ಕೊಡುವಂತೆ ಕೇಳುತ್ತಿದ್ದಾರೆ.
ಇದರಿಂದ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗಿರುವ ರೈತರು, ಎಪಿಎಂಸಿಗಳಲ್ಲಿ ಏಕಾಏಕಿ ಹೆಸರು ಬೆಲೆ ಇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿತ್ತನೆಯಿಂದ ಹಿಡಿದು ಹೆಸರುಕಾಳು ಬಿಡಿಸುವವರೆಗೆ ಎಕರೆಗೆ ಹತ್ತಾರು ಸಾವಿರ ರೂ. ಖರ್ಚು ಮಾಡಿರುವ ರೈತರು ಅತಿವೃಷ್ಟಿಯಂತಹ ಅನೇಕ ವಿಕೋಪಗಳ ಮಧ್ಯೆಯೂ ಒಂದಿಷ್ಟು ಫಸಲು ಕೈಗೆ ಬಂದ ಖುಷಿಯಲ್ಲಿದ್ದಾರೆ. ಆದರೆ, ಆ ಸಂತಸವನ್ನು ಬೆಲೆ ಇಳಿಸುವ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಈಗ ಬೆಲೆ ಇಲ್ಲದೇ ರೈತರ ಬದುಕು ದುಸ್ತರವಾಗಿದೆ.
ಸದ್ಯ ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಸರುಕಾಳು ಪ್ರತಿ ಕ್ವಿಂಟಾಲ್ಗೆ (ಗುರುವಾರ) ಕನಿಷ್ಠ 3276 ರೂ. ಹಾಗೂ ಗರಿಷ್ಠ 6346 ರೂ. ದರ ಆಗಿದೆ.
ಹೆಚ್ಚು ಮಳೆಯಾಗಿದ್ದರಿಂದ ಹೆಸರುಕಾಳು ಒಂದಿಷ್ಟು ಗುಣಮಟ್ಟ ಕಡಿಮೆಯಾಗಿದೆ ಎಂಬ ನೆಪ ಮಾಡಿಕೊಂಡ ಕೆಲ ವ್ಯಾಪಾರಸ್ಥರು ಬೇಕಾಬಿಟ್ಟಿಯಾಗಿ ದರ ನಿಗದಿ ಮಾಡುತ್ತಿದ್ದಾರೆ. ಇದು ರೈತರನ್ನು ಕಂಗೆಡಿಸಿದೆ.
ಸರ್ಕಾರ ಏನು ಮಾಡುತ್ತಿದೆ: ಪ್ರತಿ ವರ್ಷ ಹೆಸರುಕಾಳು ಮಾರುಕಟ್ಟೆಗೆ ಬರುತ್ತಿದ್ದಂತೆ ದರ ಇಳಿಸಲಾಗುತ್ತದೆ. ಇದು ಸರ್ಕಾರಕ್ಕೂ ಗೊತ್ತು. ಹಾಗಾಗಿ ಹೆಸರುಕಾಳು ಬೆಳೆ ಬರುತ್ತಿದ್ದಂತೆ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿ ಖರೀದಿ ಕೇಂದ್ರ ಆರಂಭಿಸಬೇಕೆಂಬುದು ರೈತ ಸಮುದಾಯದ ಒತ್ತಾಯ.
ರೈತರು ಇಷ್ಟೆಲ್ಲ ಪಡಬಾರದ ಕಷ್ಟ ಪಡುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ ಎಂದು ಅನ್ನದಾತರು ಆಕ್ರೋಶದಿಂದ ಕೇಳುತ್ತಿದ್ದಾರೆ.
ಹತ್ತು ಎಕರೆ ಹೆಸರು ಬೆಳೆದಿದ್ದೇನೆ. ಎಲ್ಲ ಸ್ವಚ್ಛ ಮಾಡಿ ಚೀಲ ತುಂಬಿಕೊಂಡು ಗುರುವಾರ ಹುಬ್ಬಳ್ಳಿ ಎಪಿಎಂಸಿಗೆ ತೆಗೆದುಕೊಂಡು ಹೋಗಿದ್ದೆ. ಆದರೆ, ಅಲ್ಲಿ ಮೂರು ಸಾವಿರ ರೂ.ಗೆ ಕೇಳುತ್ತಿದ್ದಾರೆ. ಇದೇ ದರಕ್ಕೆ ಮಾರಾಟ ಮಾಡಿದರೆ ಹೆಸರು ಬೆಳೆಯಲು ಮಾಡಿದ ಖರ್ಚು ಸಹ ಸಿಗುವುದಿಲ್ಲ ಎಂದು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ರೈತ ಕೆ.ಎಸ್. ಸೈಬಣ್ಣವರ ಅಲವತ್ತುಕೊಂಡರು.
3 ಲಕ್ಷ ಕ್ವಿಂಟಾಲ್: ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಸುಮಾರು 46 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬೆಳೆಯಲಾಗಿದ್ದು, ಅಂದಾಜು 3.4 ಲಕ್ಷ ಕ್ವಿಂಟಾಲ್ ಮಾರುಕಟ್ಟೆಗೆ ಆವಕವಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ಗೆ 7196 ರೂ. ಘೋಷಣೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ದರ ಕುಸಿದಿರುವುದರಿಂದ ಕೂಡಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರ ಹಿತ ಕಾಪಾಡಬೇಕಿದೆ.
ಹೆಸರುಕಾಳಿನ ಕನಿಷ್ಠ ಮಾರಾಟ ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 20ರಂದು ಸಭೆ ನಡೆಸಿ ಬೆಂಬಲ ಬೆಲೆಯಡಿ ಖರೀದಿಸಲು ಸೂಕ್ತ ನಿರ್ಧಾರ ಕೈಗೊಳ್ಳಲು ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರದ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. | ಪ್ರಭಾಕರ ಅಂಗಡಿ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು, ಧಾರವಾಡ