ಜಿಲ್ಲೆ

ಹೆಸರು ಬೆಳೆಗೆ ಹಳದಿ ರೋಗ

ಹುಬ್ಬಳ್ಳಿ: ಈ ವರ್ಷ ಮಳೆ-ಬೆಳೆ ಉತ್ತಮವಾಗಿ ರೈತರು ನಿಟ್ಟುಸಿರು ಬಿಡುತ್ತಿರುವಾಗ ಕೆಲವು ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡಿದ್ದು, ಮಾರಕವಾಗಿ ಪರಿಣಮಿಸಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ಭಾಗದಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಂಡು ಬಂದಿದ್ದು, ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹೆಸರು ಪ್ರಮುಖ ಬೆಳೆಯಾಗಿದೆ. ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2.22 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದ್ದರೆ, ಅದರಲ್ಲಿ 44842 ಹೆಕ್ಟೇರ್ ಹೆಸರು ಬೆಳೆ ಬಿತ್ತನೆಯಾಗಿದೆ. ಅಂದರೆ ಜಿಲ್ಲೆಯ ಒಟ್ಟು ಬಿತ್ತನೆಯಲ್ಲಿ ಶೇ. 20 -25ರಷ್ಟಿದೆ.

ಎರಡೂವರೆಯಿಂದ ಮೂರು ತಿಂಗಳ ಬೆಳೆಯಾದ ಹೆಸರು ಆಗಸ್ಟ್ ಎರಡು- ಮೂರನೇ ವಾರದಲ್ಲಿ ಕೊಯ್ಲಿಗೆ ಬರುತ್ತದೆ. ಈಗಾಗಲೇ ಬಹಳಷ್ಟು ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಇದೀಗ ಹಳದಿ ರೋಗದಿಂದಾಗಿ ಕಂಗಾಲಾಗಿದ್ದಾರೆ.

ಸಾಕಷ್ಟು ಪ್ರಯತ್ನ ಮಾಡಿ ಹಳದಿ ರೋಗ ನಿಯಂತ್ರಣಕ್ಕೆ ಮುಂದಾದರೂ ಕೆಲವೆಡೆ ಅದು ಕೈಮೀರಿ ಹೋಗಿದೆ. ಕೆಲವು ಹೊಲಗಳಲ್ಲಿ ಪೂರ್ತಿ ಹಳದಿ ಕಾಣಿಸುತ್ತಿದೆ. ಹಾಗಾಗಿ ಇಳುವರಿ ಬಗ್ಗೆ ರೈತರು ಸಾಕಷ್ಟು ಚಿಂತಾಕ್ರಾಂತರಾಗಿದ್ದಾರೆ.

ಹೆಸರು ಬೆಳೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ರೋಗ ಬಂದಿರುವುದು ಇದೇ ಮೊದಲು. ಹತೋಟಿಗೂ ಸಿಗುತ್ತಿಲ್ಲ. ಗಿಡಗಳು ಕಳೆಗುಂದಿದ್ದು ಇಳುವರಿ ಅತ್ಯಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೋಳಿವಾಡ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ ಸಲಹೆ ಏನು?: ಹೆಸರಿನ ಗಿಡದ ಎಲೆಗಳು ಹಳದಿಯಾಗುವುದು ಎಂದರೆ ಇದೊಂದು ನಂಜು ರೋಗ. ಸಸ್ಯ ಹೇನು, ಕೀಟಗಳು ಚಿಗುರೆಲೆ ಮತ್ತು ಕಾಯಿಗಳಿಂದ ರಸ ಹೀರುತ್ತವೆ. ಇಂತಹ ಕೀಟಗಳೇ ನಂಜು ಹೊತ್ತು ತರುತ್ತವೆ. ಹೀಗೆ ನಂಜಿಗೆ ಒಳಪಟ್ಟ ಗಿಡಕ್ಕೆ ಮತ್ತೊಂದು ಗಿಡ ಸ್ಪರ್ಷವಾಗುವುದರಿಂದ ಒಂದರಿಂದ ಮತ್ತೊಂದಕ್ಕೆ ಹರಡುತ್ತದೆ. ಇದು ಕೂಡ ಸೋಂಕು ಕಾಯಿಲೆ.

ಬಾಧಿತ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಗಿಡಗಳು ಕುಳ್ಳಗಾಗಿರುತ್ತವೆ. ರೋಗ ತೀವ್ರವಾಗಿದ್ದರೆ ಕಾಯಿ ಬಿಡುವುದಿಲ್ಲ. ಹಾಗಾಗಿ ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ಕೀಟಗಳ ಹತೋಟಿಗೆ 1 ಮಿ.ಲೀ. ಮಿಥೈಲ್ ಪ್ಯಾರಾಥಿಯನ್ 50 ಇಸಿ ಅಥವಾ 1 ಮಿ.ಲೀ. ಮಾನೋಕ್ರೊಟೊಪಾಸ್ 36 ಎಸ್​ಎಲ್ ಅಥವಾ 1.7 ಮಿ.ಲೀ. ಡೈಮಿಥೋಯಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.

ನಂಜು (ಹಳದಿ) ರೋಗಕ್ಕೆ ಔಷಧಿ ಇಲ್ಲ. ಆದರೆ, ನಂಜು ವಾಹಕಗಳಾದ ಕೀಟ ನಿರ್ವಹಣೆ ಸಾಧ್ಯವಿದೆ. ರೋಗ ಪೀಡಿತ ಗಿಡ ಕಿತ್ತು ಹೂಳುವುದು ಮತ್ತು ಕೀಟಗಳ ಹತೋಟಿಗೆ ಕ್ರಿಮಿನಾಶಕ ಸಿಂಪರಿಸಿ ಹತೋಟಿಗೆ ತರಬಹುದು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿ. ತಿಳಿಸಿದ್ದಾರೆ.

ಸಮೀಕ್ಷೆ ಮಾಡುತ್ತಿದ್ದೇವೆಹೆಸರು ಬೆಳೆಗೆ ಹಳದಿ ರೋಗ ಬಂದಿರುವುದು ಗಮನಕ್ಕೆ ಬಂದಿದೆ. ನವಲಗುಂದ, ಅಣ್ಣಿಗೇರಿ ಭಾಗದಲ್ಲಿ ಹೆಚ್ಚು ಕಂಡು ಬಂದಿದೆ. ಹತೋಟಿಗೆ ಸಲಹೆಗಳನ್ನು ನೀಡಿದ್ದೇವೆ. ರೋಗದ ಸಮೀಕ್ಷೆಗೆ ಸೂಚಿಸಲಾಗಿದ್ದು, ಎಷ್ಟು ನಷ್ಟವಾಗಲಿದೆ ಎಂಬುದು ನಂತರ ತಿಳಿಯಲಿದೆ.- ರಾಜಶೇಖರ ವಿ., ಕೃಷಿ ಇಲಾಖೆ ಜಂಟಿ ನಿರ್ದೇಶಕರು ಧಾರವಾಡ

---