ಮಂಜುನಾಥ ಟಿ.ಭೋವಿ ಮೈಸೂರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನಲ್ಲಿ ಮಂಡಿಸಿದ ಆಯವ್ಯಯದಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಘೋಷಿಸಿದ್ದ ಬಹುತೇಕ ಭರವಸೆಗಳು ಇನ್ನೂ ಈಡೇರಿಲ್ಲ!
2 ಘೋಷಣೆಗಳು ಮಾತ್ರ ಕಾರ್ಯರೂಪಕ್ಕೆ ಬರುವ ಹಂತ ತಲುಪಿವೆ. ಉಳಿದ ಭರವಸೆಗಳು ಇನ್ನೂ ಕಡತದಲ್ಲೇ ಉಳಿದುಕೊಂಡಿವೆ. ಇದು ಜಿಲ್ಲೆಯ ಜನರಲ್ಲಿ ಆಶಾಭಂಗ ಉಂಟುಮಾಡಿದೆ.
ಕೇಂದ್ರ ಸರ್ಕಾರದ ಬಜೆಟ್ ಬೆನ್ನಲ್ಲೇ ರಾಜ್ಯ ಬಜೆಟ್‌ಗಾಗಿ ಸಿದ್ಧತೆ ನಡೆದಿದೆ. ಬಿಜೆಪಿ ಸರ್ಕಾರದ ಕೊನೆಯ ಅಧಿವೇಶನ ಫೆ. 10ರಂದು ಶುರುವಾಗಲಿದ್ದು, 2023-2024ನೇ ಸಾಲಿನ ಆಯವ್ಯಯವನ್ನು ಫೆ.17ರಂದು ಮಂಡಿಸಲಾಗುತ್ತದೆ. ಈ ಸಂದರ್ಭದಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿದ್ದ ಭರವಸೆಗಳ ಕುರಿತು ಅವಲೋಕನ ಮಾಡಿದರೆ ನಿರಾಶೆಯಾಗುತ್ತದೆ.
ಪ್ರಸ್ತಕ ಸಾಲಿನ ಆರ್ಥಿಕ ವರ್ಷ ಮುಗಿಯಲು 2 ತಿಂಗಳು ಮಾತ್ರ ಬಾಕಿ ಉಳಿದಿವೆ. ಜತೆಗೆ, ಮುಂದಿನ ತಿಂಗಳಾಂತ್ಯದ ಹೊತ್ತಿಗೆ ವಿಧಾನಸಭಾ ಚುನಾವಣೆ ಘೋಷಣೆ ಆಗುವ ನಿರೀಕ್ಷೆಯೂ ಇದೆ. ಈ ಸಂದರ್ಭದಲ್ಲಿ ಉಳಿದ ಭರವಸೆಗಳು ಅನುಷ್ಠಾನಕ್ಕೆ ಬರುತ್ತವೆಯೋ? ಇಲ್ಲವೋ ಎಂಬ ಅನುಮಾನ ಮೂಡಿದೆ. ಬಹುತೇಕ ಘೋಷಣೆಗಳು ಘೋಷಣೆಯಾಗಿಯೇ ಉಳಿದುಕೊಳ್ಳಬಹುದು. ಹೀಗಾದರೆ, ಅದು ಮೂಗಿಗೆ ತುಪ್ಪ ಸವರಿದಂತಾಗಲಿದೆ.
ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಬಿಜೆಪಿ ಏನಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಘೋಷಣೆಗಳನ್ನು ಕಾರ್ಯಗತಗೊಳಿಸಲು ಮನಸ್ಸು ಮಾಡಬಹುದು. ಆದರೆ, ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಆ ಘೋಷಣೆಗಳು ನನೆಗುದಿಗೆ ಬೀಳುವುದು ನಿಶ್ಚಿತ.
ಜಾರಿಯಾಗದ ಪ್ರವಾಸಿ ವೃತ್ತ:
ಮೈಸೂರಿನಲ್ಲಿ ಪ್ರವಾಸಿ ವೃತ್ತ ಸ್ಥಾಪನೆ ಮಾಡುವ ಘೋಷಣೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. 2022ರ ದಸರಾಕ್ಕೂ ಮುನ್ನವೇ ಇದು ಜಾರಿ ಆಗಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಆದಾಗ್ಯೂ ಇದು ಇನ್ನೂ ಜಾರಿಗೆ ಬಂದಿಲ್ಲ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಸೇರಿ ಪ್ರವಾಸಿ ವೃತ್ತವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಪ್ರವಾಸಿ ವೃತ್ತದಿಂದ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ನವಚೈನತ್ಯ ದೊರೆಯಲಿದ್ದು, ಸುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮದ ಪ್ರಗತಿಗೂ ಅನುಕೂಲವಾಗಲಿದೆ.
ಸ್ಥಾಪನೆಯಾಗದ ಜಾಗತಿಕ ತಂತ್ರಜ್ಞಾನ ಕೇಂದ್ರ:
ಮೈಸೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಇನ್ನೂ ಕಣ್ತೆರೆದಿಲ್ಲ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಮಾರು 30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಈ ಕೇಂದ್ರವನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪನೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಪ್ರಸಕ್ತ 2022-23ನೇ ಸಾಲಿನ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ಈವರೆಗೂ ನಡೆದಿಲ್ಲ.
ಸ್ಥಾಪನೆಯಾಗದ ಹಾಸ್ಟೆಲ್ ಸಮುಚ್ಛಯ:
ಮೈಸೂರಿನಲ್ಲಿ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೂ ಚಾಲನೆ ದೊರೆತಿಲ್ಲ. 1,000 ವಿದ್ಯಾರ್ಥಿಗಳ ಸಾಮರ್ಥ್ಯದ ಬಹುಮಹಡಿಯ ಹಾಸ್ಟೆಲ್ ಸಮುಚ್ಛಯಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ದೊರೆಯಲಿದೆ. ಹಾಸ್ಟೆಲ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲು ಮೈಸೂರಿಗೆ ಬರುವುದಾಗಿ ಸಿಎಂ ಇಲ್ಲಿಗೆ ಬಂದಾಗ ಹೇಳಿದ್ದಾರೆ. ಆದರೆ, ಈ ಕಾಮಗಾರಿ ಆರಂಭಿಸಲು ಇನ್ನೂ ಭೂಮಿಪೂಜೆ ಮಾಡಿಲ್ಲ.
ಉದ್ಯೋಗಸ್ಥ ಮಹಿಳಾ ಹಾಸ್ಟೆಲ್ ಆಗಿಲ್ಲ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೈಸೂರಿನಲ್ಲಿ ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳನ್ನು ಪ್ರಾರಂಭಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದು ಸಹ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದಾಗಿ ಉದ್ಯೋಗಸ್ಥ ಮಹಿಳೆಯರ ವಸತಿ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ.
ಅಗರಬತ್ತಿ ಕ್ಲಸ್ಟರ್ ಯಾವಾಗ?
ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಮೈಸೂರಿನಲ್ಲಿ ಅಗರಬತ್ತಿ ಕ್ಲಸ್ಟರ್ ಅಭಿವೃದ್ಧಿಪಡಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿತ್ತು. ಆದರೆ ಆ ಆಶ್ವಾಸನೆಯನ್ನು ರಾಜ್ಯ ಸರ್ಕಾರ ಮರೆತುಬಿಟ್ಟಿದೆ. ಈ ಕುರಿತು ಎಲ್ಲಿಯೂ ಚರ್ಚೆಯೂ ನಡೆದಿಲ್ಲ.
ಕೈಬಿಟ್ಟರುವ ರೋಪ್‌ವೇ ಯೋಜನೆ:
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಘೋಷಣೆ ಮಾಡಿದ್ದ ಚಾಮುಂಡಿಬೆಟ್ಟದ ರೋಪ್‌ವೇ ಯೋಜನೆಯನ್ನು ಕೈಬಿಡಲಾಗಿದೆ. ಪರ್ವಮಾಲಾ ಯೋಜನೆ ಅಡಿ ಈ ಕಾಮಗಾರಿಯನ್ನು ಕೈಗೆತ್ತಿಗೊಳ್ಳಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದಾಗಿ ಯೋಜನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.
ಕೆಆರ್ ಆಸ್ಪತ್ರೆಗೆ ಹೊಸ ರೂಪ ಶೀಘ್ರ:
‘ದೊಡ್ಡಾಸ್ಪತ್ರೆ’ ಎಂದೇ ಹೆಸರುವಾಸಿಯಾಗಿರುವ ನಗರದ ಕೃಷ್ಣರಾಜೇಂದ್ರ ಆಸ್ಪತ್ರೆಯ ಕಟ್ಟಡಗಳಿಗೆ ಹೊಸರೂಪ ನೀಡುವ ಕಾಲ ಕೊನೆ ಗೂ ಕೂಡಿಬರುವ ಹಂತಕ್ಕೆ ಬಂದಿದೆ. ಕೆಆರ್ ಆಸ್ಪತ್ರೆಯೂ ಸೇರಿದಂತೆ 14 ಕಟ್ಟಡ ದುರಸ್ತಿ ಮಾಡಲು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲಸ ಆರಂಭದ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರನ್‌ವೇ ವಿಸ್ತರಣೆಗಾಗಿ 150 ಕೋಟಿ ರೂ.
ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆಗಾಗಿ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 150 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
ರನ್ ವೇ ವಿಸ್ತರಣೆ ಭೂ ಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ 319 ಕೋಟಿ ರೂ. ನೀಡಲು ನಿರ್ಧರಿಸಿದೆ. ಈಗಾಗಲೇ 150 ಕೋಟಿ ರೂ.ಗಳನ್ನು ಕೆಐಎಡಿಬಿಗೆ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡು ಭೂಸ್ವಾಧೀನಪಡಿಸಿಕೊಳ್ಳುವ ಕಾರ್ಯ ಕೈಗೊಳ್ಳಬೇಕಿದೆ.
ಅನುಷ್ಠಾನ ಹಂತದಲ್ಲಿರುವ ಭರವಸೆ
* 89 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್. ಆಸ್ಪತ್ರೆಯ ಕಟ್ಟಡಗಳ ನವೀಕರಣ.
* ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ನೆರವು
ಇನ್ನೂ ಜಾರಿಯಾಗದ ಘೋಷಣೆಗಳು
* ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಸೇರಿ ಪ್ರವಾಸಿ ವೃತ್ತ ಅಭಿವೃದ್ಧಿ
* ಮುಕ್ತ ವಿವಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ
* ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ
* ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್