ಮೂಡಿಗೆರೆ: ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಆಡಳಿತವನ್ನು ಹೆಸಗಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಒತ್ತಾಯಿಸಿದರು.
ಹೆಸಗಲ್ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರು ಶುಕ್ರವಾರ ತಾಲೂಕು ಕಚೇರಿ ಎದುರು ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾತನಾಡಿ, 2018ರಲ್ಲಿ 600 ಕುಟುಂಬಗಳು ನಿವೇಶನಕ್ಕಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರೂ ನಿವೇಶನ ನೀಡಿಲ್ಲ. ಕೊಲ್ಲಿಬೈಲ್ ಎಂಬಲ್ಲಿ 40 ಎಕರೆ ಸರ್ಕಾರಿ ಗೋಮಾಳ ಜಾಗವನ್ನು ನಿವೇಶನ ರಹಿತರಿಗೆ ಮೀಸಲಿರಿಸಬೇಕು. ನಿವೇಶನ ರಹಿತರಿಗೆ 5 ಎಕರೆ, ಪಟ್ಟಣ ಪಂಚಾಯಿತಿಗೆ 5 ಎಕರೆ, ಸರ್ಕಾರಿ ಅಧಿಕಾರಿಗಳ ಸಂಘಕ್ಕೆ 1.50 ಎಕರೆ ಜಾಗ ನೀಡುವಂತೆ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಸ್ಥರ ನಿವೇಶನಕ್ಕೆ 5 ಎಕರೆ ಸಾಲದು 10 ಎಕರೆ ಜಾಗ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಶಿವಣ್ಣ ಮಾತನಾಡಿ, ಹೆಸಗಲ್ ಗ್ರಾಮದಲ್ಲಿರುವ 40 ಎಕರೆ ಸರ್ಕಾರಿ ಜಾಗದಲ್ಲಿ 5 ಎಕರೆ ಭೂಮಿಯನ್ನು ಪಟ್ಟಣ ಪಂಚಾಯಿತಿಗೆ ಮೀಸಲಿರಿಸಲಾಗಿದೆ. ನಿವೇಶನಕ್ಕಾಗಿ ಸರ್ಕಾರಿ ಜಾಗ ನೀಡುವುದಕ್ಕೆ ತಕರಾರಿಲ್ಲ. ಗ್ರಾಮದ ನಿವೇಶನ ರಹಿತರಿಗಾಗಿ ಸರ್ಕಾರಿ ಜಾಗ ಮೀಸಲಿರಿಸಬೇಕು. 94ಸಿ ಅರ್ಜಿ ಕಡೆಗಣಿಸಲಾಗುತ್ತಿದೆ. ಅರ್ಜಿ ನೀಡಿದವರಿಗೆ ಕೂಡಲೆ ಹಕ್ಕುಪತ್ರ ಒದಗಿಸಬೇಕು. ಹೆಸಗಲ್ ಕಾಲನಿ ಸರ್ವೇ ನಂ. 3/1ರಲ್ಲಿ 4.30 ಎಕರೆ ಜಮೀನಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ 60ಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಸಂಜೆ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಹೆಸಗಲ್ ಗ್ರಾಮದಲ್ಲಿ ನಿವೇಶನಕ್ಕಾಗಿ 10 ಎಕರೆ ಜಾಗ ನೀಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರ್ ಅಶ್ವಿನಿ ಅವರಿಗೆ ತಿಳಿಸಲಾಗಿದೆ. ಅರ್ಧಕ್ಕೆ ನಿಂತಿರುವ ಜೆಜೆಎಂ ಕುಡಿಯುವ ನೀರಿನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಗ್ರಾಮಸ್ಥರ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಹೆಸಗಲ್ ಗ್ರಾಮಸ್ಥರ ನಿಯೋಗವನ್ನು ಜಿಲ್ಲಾಧಿಕಾರಿ ಬಳಿ ಕರೆದೊಯ್ದು ಚರ್ಚೆ ನಡೆಸಲಾಗುವುದು. ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸುವ ಹಂತಕ್ಕೆ ಹೋಗದಂತೆ ಕ್ರಮ ವಹಿಸಲು ಸರ್ಕಾರಕ್ಕೆ ಹತ್ರ ಬರೆಯುವುದಾಗಿ ತಿಳಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ತಹಸೀಲ್ದಾರ್ ಎಸ್.ಅಶ್ವಿನಿ ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಮುಷ್ಕರ ಸ್ಥಗಿತಗೊಳಿಸಿದರು.
ಗ್ರಾಪಂ ಸದಸ್ಯರಾದ ಪ್ರಶಾಂತ್, ಅಶೋಕ್, ಪೂರ್ಣೇಶ್, ಮಾಜಿ ಸದಸ್ಯರಾದ ಕಾಮಾಕ್ಷಿ, ಮಹಮ್ಮದ್, ಕಲ್ಲೇಶ್ ಇತರರಿದ್ದರು.