ಬೆಳಗಾವಿ: ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಹೆಳವ ಸಮುದಾಯದಿಂದ ಸೋಮವಾರ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟಿಸಲಾಯಿತು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಲೆಮಾರಿ ಗುಂಪಿಗೆ ಸೇರಿದ ಹೆಳವ ಜನಾಂಗದವರು ಜೀವನೋಪಾಯಕ್ಕಾಗಿ ಒಕ್ಕಲು ಮನೆತನದವರ ವಂಶಾವಳಿ ಹೇಳುತ್ತ ಊರೂರು ಅಲೆದಾಡುತ್ತಾರೆ. ಮಳೆ-ಗಾಳಿ, ಬಿಸಿಲು ಎನ್ನದೆ ಬೀದಿ ಬೀದಿಯಲ್ಲಿ ಟೆಂಟ್ ಹಾಕಿ ಬದುಕುತ್ತಿದ್ದಾರೆ. ಶಾಶ್ವತ ನೆಲೆ ಇಲ್ಲದೆ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಪರಿಶಿಷ್ಟ ಪಂಗಡ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದ್ದು, ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಬೇಕಾದ ಅಲೆಮಾರಿ ಹೆಳವ ಸಮುದಾಯವು ಈಗ ಪ್ರವರ್ಗ-1ರಲ್ಲಿದೆ. ಅದನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಒತ್ತಾಯಿಸಿದರು.
ಹಲವು ಬಾರಿ ಹೋರಾಟ ನಡೆಸಿದರೂ ಸರ್ಕಾರ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. 2 ವರ್ಷಗಳಿಂದ ಹೆಳವ ಸಮಾಜದ ಪರಿಶಿಷ್ಟ ಜಾತಿಯ ಕಡತವು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇದೆ. ಹೆಳವ ಸಮಾಜ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕಿಂತ ಹಿಂದುಳಿದಿದೆ. ಆದ್ದರಿಂದ ಸರ್ಕಾರ ಸಮುದಾಯವನ್ನು ಎಸ್ಟಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಸಿದ್ದಪ್ಪ ಹೆಳವರ, ಶಿವಲಿಂಗ ಹೆಳವರ, ಸದಾಶಿವ ಹೆಳವರ, ಕಲ್ಲೊಳೆಪ್ಪ ದೊಡಮನಿ, ಶಂಕರಲಿಂಗ ಸ್ವಾಮೀಜಿ, ಕಾಳಪ್ಪ ಹೆಳವರ ಇತರರಿದ್ದರು.