ಬೀದರ್: ಬೈಕ್ ಸವಾರರು ಹೆಲ್ಮೆಟ್ ಹಾಗೂ ಕಾರ್ ಚಾಲಕರು ಸೀಟ್ ಬೆಲ್ಟ್ ಕಡ್ಡಾಯ ಹಾಕಿಕೊಳ್ಳಬೇಕು. ಇದರಿಂದ ಅಪಘಾತಗಳಿಂದಾಗುವ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕಡ್ಡಾಯ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಜಿಲ್ಲೆಯಲ್ಲಿ ೩೩೨ ಜನ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪೊಲೀಸ್ ತಂಡ ವಿಶ್ಲೇಷಣೆ ಮಾಡಿದಾಗ ಬೈಕ್ ಸವಾರರು ಹೆಲ್ಮೆಟ್, ಕಾರ್ ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಕುರಿತು ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ದಂಡ ಹಾಕುವ ಬದಲಾಗಿ ದಂಡದ ಮೊತ್ತದಲ್ಲಿ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಅಭಿಯಾನ ಮಾಡಲಾಗುವುದು. ಹೆಲ್ಮೆಟ್ ಧರಿಸದವರನ್ನು ಕರೆಯಿಸಿ ರಸ್ತೆ ಅಪಘಾತದ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಲಾಗುತ್ತಿದೆ. ಇನ್ನು ಮುಂದೆ ಕಡ್ಡಾಯ ಹೆಲ್ಮೆಟ್ ಧರಿಸಬೇಕು ಎಂದು ಸಾರ್ವಜನಿಕರಿಂದ ಶಪಥ ಸಹ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ದಂಡ ವಿಧಿಸುವುದಕ್ಕಿಂತ ಜನರ ಜೀವ ಮುಖ್ಯ. ಹೀಗಾಗಿ ಎಲ್ಲರೂ ಹೆಲ್ಮೆಟ್ ಧರಿಸಬೇಕೆಂಬುದೇ ನಮ್ಮ ಧ್ಯೇಯ. ಬೀದರ್ ಹೆಲ್ಮೆಟ್‌ಯುಕ್ತ ಜಿಲ್ಲೆ ಮಾಡಲು ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಸುಗಮ, ಸುರಕ್ಷಿತ ಸಂಚಾರ ಸಾಕಾರಕ್ಕೆ ಜನರ ಸಹಕಾರ ಮತ್ತು ಸಹಭಾಗಿತ್ವ ಮುಖ್ಯ ಎಂದು ಹೇಳಿದರು.
ಡಿವೈಎಸ್ಪಿ ಕೆ.ಎಂ. ಸತೀಶ್, ಗಾಂಧಿಗಂಜ್ ಠಾಣೆ ಸಿಪಿಐ ಹನುಮರಡ್ಡಪ್ಪ, ನ್ಯೂ ಟೌನ್ ಸಿಪಿಐ ವೆಂಕಟೇಶ ಯಡಹಳ್ಳಿ, ಸಂಚಾರ ಠಾಣೆ ಸಿಪಿಐ ಕಪಿಲ್ ಹಾಗೂ ಸಿಬ್ಬಂದಿ ವರ್ಗ ಇದ್ದರು.
೬೧ ಬೈಕ್‌ಗಳ ಸೈಲೆನ್ಸರ್ ನಾಶ
ಕಾರ್ಯಕ್ರಮದಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರ್‌ಗಳನ್ನು ನಾಶಗೊಳಿಸಲಾಯಿತು. ಜಿಲ್ಲೆಯ ವಿವಿಧೆಡೆ ಜಪ್ತಿ ಮಾಡಿದ ೬೧ ಸೈಲೆನ್ಸರ್‌ಗಳನ್ನು ರಸ್ತೆ ಮೇಲೆ ಇಟ್ಟು ಅದರ ಮೇಲೆ ರೋಡ್ ರೂಲರ್ ಓಡಾಡಿಸಿ ನಾಶಗೊಳಿಸಲಾಯಿತು. ಬೈಕ್‌ಗಳಿಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿದರೆ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ನಗರದ ಗ್ಯಾರೇಜ್ ಮಾಲೀಕರಿಗೆ ಈ ಬಗ್ಗೆ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಹೇಳಿದರು.
ಸುಗಮ, ಸುರಕ್ಷಿತ ಸಂಚಾರ ದೃಷ್ಟಿಯಿಂದ ನಾನಾ ಕ್ರಮ ಕೈಗೊಳ್ಳಲಾಗುತ್ತಿದೆ. ಬೈಕ್ ದುರಂತಗಳಲ್ಲಿ ಆಗುವ ಹೆಚ್ಚಿನ ಪ್ರಾಣ ಹಾನಿ ತಪ್ಪಿಸುವಲ್ಲಿ ಹೆಲ್ಮೆಟ್ ಪಾತ್ರ ಮುಖ್ಯ. ಈ ಜನಪರ ಕಾಳಜಿಯಿಂದ ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯಕ್ಕೆ ಸೂಚಿಸಿದೆ. ಇದನ್ನು ಚಾಚೂತಪ್ಪದೆ ಪಾಲಿಸುವುದು ಎಲ್ಲರ ಕರ್ತವ್ಯ. ನಮ್ಮ ಜೀವದ ರಕ್ಷಣೆಗೆ ನಾವೇ ಮುಂದಾಗಬೇಕು. ಇಲಾಖೆಗೆ ಜನ ಸಾಥ್ ನೀಡಬೇಕು.
| ಚನ್ನಬಸವಣ್ಣ ಲಂಗೋಟಿ ಎಸ್ಪಿ