ಜಿಲ್ಲೆ

ಹೆಲ್ಮೆಟ್​ ಧರಿಸಿ ವಾಹನ ಚಲಾಯಿಸಿ

ಸವಾರರಿಗೆ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಸಲಹೆ

ತುಮಕೂರು: ನಗರದ ಬಿಜಿಎಸ್​ ವೃತ್ತದಲ್ಲಿ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಸೂಚನಾ ಫಲಕಗಳ ಅರಿವಿನ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ, ಹೆಲ್ಮೆಟ್​ ಧರಿಸಿಯೇ ವಾಹನ ಚಲಾಯಿಸಬೇಕು. ಅಪಘಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಜತೆಗೆ ಎಲ್ಲರೂ ಸಂಚಾರಿ ನಿಯಮ ಪಾಲಿಸಬೇಕು, ಪಾಲಕರು ಚಿಕ್ಕ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ನೀಡಬಾರದು. 18 ವರ್ಷಆದ ನಂತರ ಅವರಿಗೆ ಲೈಸೆನ್ಸ್​ ಕೊಡಿಸಿಯೇ ವಾಹನಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಜೀವ ಮುಖ್ಯ ವಾಹನ ಚಲಾಯಿಸುವಾಗ ನಿಧಾನವಾಗಿ, ಅಂತರ ಕಾಯ್ದುಕೊಂಡು, ರಸ್ತೆ ನಿಯಮಗಳನ್ನು ಪಾಲಿಸುತ್ತಾ ವಾಹನಗಳನ್ನು ಚಲಾಯಿಸಬೇಕು. ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಪಾಲಕರು ಆಕ್ರಂದನ ನೋಡಲು ಆಗುವುದಿಲ್ಲ. ಆಟೋ, ಬಸ್​, ಇತ್ಯಾದಿ ವಾಹನಗಳಲ್ಲಿ ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಹಾಕಬೇಕು ಚಾಲಕರು ದುಡ್ಡಿನ ಆಸೆಗಾಗಿ ಹೆಚ್ಚು ಜನರನ್ನು ಕುಳ್ಳಿರಿಸಿ ಅಪಘಾತವಾದರೆ ಆ ಸಂಸಾರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.ವಿದ್ಯಾರ್ಥಿಗಳು ಎಲ್ಲರೂ ರಸ್ತೆ ಸುರಕ್ಷತಾ ನಿಯಮ ಖಡ್ಡಾಯವಾಗಿ ಪಾಲಿಸಬೇಕು ಎಂದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ, ಇದನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ, ವಾಹನ ಸವಾರರು ವಾಹನ ಚಲಾಯಿಸುವಾಗ ಹೆಚ್ಚಿನ ನಿಗಾ ವಹಿಸಿ ವಾಹನಗಳನ್ನು ಓಡಿಸಬೇಕು ಎಂದರು.

ಪಾಲಿಕೆ ಆಯುಕ್ತ ಬಿ.ವಿ.ಅಶ್ಚಿಜ ಮಾತನಾಡಿ, ಹೆಲ್ಮೆಟ್​ ಬಳಸಿ ಜೀವ ಉಳಿಸಿಕೊಳ್ಳಬೇಕು, ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್​ ಬಳಸಬೇಕು. ಕಾರಿನಲ್ಲಿಪ್ರಯಾಣಿಸುವಾಗ ಸೀಟ್​ ಬೆಲ್ಟ್​ ಬಳಸಬೇಕು, ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಕುಳಿಸಿಕೊಂಡು ವಾಹನ ಚಲಾಯಿಸಬೇಕು. ಎಸ್​ಪಿ ಕಚೇರಿ ಮುಂಭಾಗದಲ್ಲಿ ರಸ್ತೆ ಸುರಕ್ಷತಾ ಮಾದರಿ ಉದ್ಯಾನವನ ಮಾಡಿದ್ದೇವೆ ಎಲ್ಲರೂ ಅಲ್ಲಿಗೆ ಒಮ್ಮೆ ಭೇಟಿ ನೀಡಿ ಅದನ್ನು ನೋಡಿ ತಿಳಿದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಮರಿಯಪ್ಪ, ಎಆರ್​ಟಿಒ ಎ.ವಿ.ಪ್ರಸಾದ್​, ಪ್ರಾಚಾರ್ಯ ಡಾ.ಟಿ.ಬಿ.ನಿಜಲಿಂಗಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಪ್ರೊ.ಟಿ.ಗಂಗಾಧರಯ್ಯ, ಪ್ರೊ.ಸಿ.ಎಸ್​.ಸೋಮಶೇಖರಯ್ಯ, ನಾಗೇಶ್​, ದಿನೇಶ್​, ಆಶಾರಾಣಿ, ಬಸವರಾಜಪ್ಪ.ಆರ್​, ಕೆ.ಎಸ್​.ಲಿಂಗದೇವರಪ್ಪ, ಚೇತನ್​ ಕುಮಾರ್​ ಮತ್ತಿತರರು ಇದ್ದರು.

ರೇಡಿಯಂ ಸ್ಟಿಕ್ಕರ್​ ಹಾಕಿ: ಎಸ್ಪಿ ಕೆ.ವಿ.ಅಶೋಕ್​ ಮಾತನಾಡಿ, ವಾಹನ ಚಲಾಯಿಸುವಾಗ ಎಡಬಲ ನೋಡಬೇಕು. ಪಾಲಕರು ಮಕ್ಕಳಿಗೆ ಯಾವ ರೀತಿ ವಾಹನ ಚಾಲನೆ ಮಾಡಬೇಕೆಂಬುದನ್ನು ಹೇಳಿ ತೋರಿಸಬೇಕು. ಕೇವಲ ಕಾನೂನುಗಳಿಗೆ ಹೆದರಿ ವಾಹನ ಚಲಾಯಿಸುವುದಲ್ಲ ವಾಹನಗಳಿಗೆ ರಾತ್ರಿ ಸಮಯದಲ್ಲಿ ಎದುರು ಬರುವವರಿಗೆ ಕಾಣಬೇಕು ಎಂದು ರೇಡಿಯಂ ಸ್ಟಿಕ್ಕರ್​ ಹಾಕಬೇಕು, ಟ್ರಾ$್ಯಕ್ಟರ್​, ಟಿಪ್ಪರ್​ಗಳಿಗೆ ದೊಡ್ಡ ದೊಡ್ಡ ರೇಡಿಯಂ ಸ್ಟಿಕ್ಕರ್​ ಹಾಕಲು ಆರ್​ಟಿಒ ಕ್ರಮಕೈಗೊಳ್ಳಬೇಕು, ಅಪಘಾತವಾದಾಗ ಪ್ರಾಣವೇ ಹೋಗುತ್ತದೆ. ಆದ್ದರಿಂದ ವಾಹನ ಚಲಾಯಿಸುವಾಗ ಎಲ್ಲರೂ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.