ಚಿತ್ರದುರ್ಗ: ಸಮಾಜದಲ್ಲಿ ಹೆಮ್ಮೆಯಿಂದ ಬದುಕಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಹೊರವಲಯದ ಭೋವಿ ಗುರುಪೀಠದಲ್ಲಿ ನಡೆದ ದಿ. ಮಂಜರಿ ಹನುಮಂತಪ್ಪ ಅವರ ಸ್ಮರಣೋತ್ಸವದಲ್ಲಿ ಮಾತನಾಡಿದರು.
ತಲೆ ಎತ್ತಿ, ಸ್ವಾವಲಂಬಿಯಾಗಿ ಬದುಕಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಇದರಿಂದ ಯಾರು ವಂಚಿತರಾಗಬಾರದು ಎಂದರು.
ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದನ್ನು ಸಮುದಾಯದವರು ಸದುಪಯೋಗ ಪಡಿಸಿಕೊಳ್ಳಿ. ಸಮಾನತೆಯಿಂದ ಬದುಕಲು ಕಲಿಯಬೇಕು. ಮಂಜರಿ ಅವರ ಶ್ರಮ ಶ್ರೇಷ್ಠವಾದುದು. ಅವರು ಆರಂಭಿಸಿರುವ ಕಾರ್ಯ ನಿರಂತರವಾಗಿ ಸಾಗಬೇಕು, ನಿಲ್ಲಬಾರದು ಎಂದು ತಿಳಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಭೋವಿ-ವಡ್ಡರು ಒಂದೆಡೆ ಸೇರುವ ಸಮುದಾಯವಲ್ಲ. ಶ್ರಮಪಟ್ಟು ದುಡಿಯುವ ಸಮಾಜ. ಅಂತಹವರನ್ನು ಸಂಘಟಿಸಿದ ಕೀರ್ತಿ ಇಮ್ಮಡಿ ಶ್ರೀಗೆ ಸಲ್ಲುತ್ತದೆ ಎಂದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಮಧ್ಯ ಕರ್ನಾಟಕದಲ್ಲಿ ಜ್ಞಾನದ ಕಣಜವಾಗಿ ಸಮುದಾಯವನ್ನು ಸಂಘಟಿಸಲು ದಿ. ಮಂಜರಿ ಹನುಮಂತಪ್ಪ ಶ್ರಮಿಸಿದ್ದಾರೆ. ಅವರು ಕೈಗೊಂಡ ಶೈಕ್ಷಣಿಕ ನಿಲುವು ಸಮುದಾಯದ ಅಭಿವೃದ್ಧಿಗೆ ಶಕ್ತಿಯಾಗಿದೆ ಎಂದು ಹೇಳಿದರು.
ಸಚಿವ ಭೈರತಿ ಸುರೇಶ್, ಶಾಸಕ ಅಜಯ್‌ಸಿಂಗ್, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ, ಮುಖಂಡ ನೇರ‌್ಲಗುಂಟೆ ರಾಮಪ್ಪ ಇತರರಿದ್ದರು.