ಜಿಲ್ಲೆ

ಹೆಬ್ಬೆಟ್ಟದ ಬಸವೇಶ್ವರಸ್ವಾಮಿಗೆ ಆಷಾಢ ವಿಶೇಷ ಪೂಜೆ

ಹಲಗೂರು: ಬಸವನ ಬೆಟ್ಟದ ಮೇಲೆ ನೆಲೆಸಿರುವ ಆರಾಧ್ಯದೇವ ಹೆಬ್ಬೆಟ್ಟದ ಬಸವೇಶ್ವರಸ್ವಾಮಿಗೆ ಆಷಾಢ ಮಾಸದ ಪ್ರಯುಕ್ತ ಸೋಮವಾರ ವಿವಿಧ ರೀತಿಯ ಬಣ್ಣಗಳಿಂದ ವರ್ಣ ಅಲಂಕಾರದಿಂದ ಆತ್ಮಲಿಂಗ ಹಾಗೂ ಬಸವೇಶ್ವರ ದೇವರ ಮೂರ್ತಿಗಳಿಗೆ ಶೃಂಗರಿಸಿ ವಿಶೇಷ ಪೂಜೆಯನ್ನು ಹಮ್ಮಿ ಕೊಳ್ಳಲಾಗಿತ್ತು.

ಆಷಾಢ ಮಾಸದ ಸೋಮವಾರ ವಿದ್ವಾನ್ ಪ್ರಸಾದ್ ಅವರ ಸಮ್ಮುಖದಲ್ಲಿ ಎಚ್. ಬಸಾಪುರ ಗ್ರಾಮಸ್ಥರು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ದೇವರ ಮೂರ್ತಿಗಳಿಗೆ ಸಿಂಗರಿಸಿ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಯಿತು.

ನಂತರ ವಿದ್ವಾನ್ ಪ್ರಸಾದ್ ಮಾತನಾಡಿ, ಪುರಾತನವಾದ ಈ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಈ ದೇವಸ್ಥಾನಕ್ಕೆ ಬಹಳ ವರ್ಷಗಳ ಹಿಂದೆ ಕಾಲ್ನಡಿಗೆಯಲ್ಲಿ ಕಾಡಿನಲ್ಲಿ ನಡೆದುಕೊಂಡು ಹೋಗಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಬರುತ್ತಿದ್ದರು.

ದೇವಸ್ಥಾನಕ್ಕೆ ಹೋಗಿ ಬರಲು ರಸ್ತೆ ಆದ ಮೇಲೆ ದೇವಸ್ಥಾನಕ್ಕೆ ಸಾರಿಗೆ ವ್ಯವಸ್ಥೆ ಇರುವುದರಿಂದ ಆಷಾಢ ಮಾಸ, ಶ್ರಾವಣ ಮಾಸಗಳಲ್ಲಿ ಹಾಗೂ ಕಾರ್ತಿಕ ಮಾಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಬಸವೇಶ್ವರಸ್ವಾಮಿ ನಿವಾರಿಸುತ್ತಾ ಜಿಲ್ಲೆಯಾದ್ಯಂತ ಹೆಸರು ವಾಸಿಯಾಗಿದೆ ಎಂದರು.