ಜಿಲ್ಲೆ

ಹೆದ್ದಾರಿ ಸಹಾಯಕರ ಕಾರ್ಯ ಶ್ಲಾಘನೀಯ

ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಫಲಾಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸುವ ಹೆದ್ದಾರಿ ಸಹಾಯಕರು ಹಾಗೂ ಆಂಬುಲೆನ್ಸ್ ಚಾಲಕರ ಸೇವೆ ಅನನ್ಯವಾಗಿದೆ ಎಂದು ವಿಜಯನಗರ ಎಸ್ಪಿ ಶ್ರೀಹರಿಬಾಬು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆಯಿಂದ ಹೆದ್ದಾರಿ ಸಹಾಯಕರು ಮತ್ತು ಆಂಬ್ಯುಲೆನ್ಸ್ ಚಾಲಕರಿಗೆ ಆಯೋಜಿಸಿದ್ದ ಹೆದ್ದಾರಿ ಸುರಕ್ಷತಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತಗಳ ಸಂಖ್ಯೆ ಶೇ. 17 ಕಡಿಮೆಯಾಗಿದೆ. ಹೆದ್ದಾರಿಯಲ್ಲಿನ ಸಹಾಯಕರ ನೆರವಿನಿಂದ ಬಹುತೇಕ ಅಪಘಾತಗಳಲ್ಲಿ ಜನರು ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.

ಹಗಲಿರುಳು ಎನ್ನದೆ ನಿಸ್ವಾರ್ಥವಾಗಿ ಹೆದ್ದಾರಿ ಸಹಾಯಕರು ಸಾರ್ವಜನಿಕರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ಬೆಂಗಾವಲಾಗಿ ಈ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಅಪಘಾತ ನಡೆದ ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಆಂಬ್ಯುಲೆನ್ಸ್ ಹಾಗೂ ಆಸ್ಪತ್ರೆಗೆ ಮಾಹಿತಿ ರವಾನಿಸಿ ಅನೇಕರ ಪ್ರಾಣ ಉಳಿಸಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆ ಎಲಬು, ಮೂಳೆ ತಜ್ಞ ಡಾ.ರವಿಕುಮಾರ್ ಮಾತನಾಡಿ, ಅಪಘಾತ ನಡೆದಾಗ ಹೆದ್ದಾರಿ ಸಹಾಯಕರು ಮೊದಲು ಕಿರುಚಾಡುವ ಗಾಯಾಳುಗಳ ರಕ್ಷಣೆಗೆ ಧಾವಿಸದೆ ಗಂಭೀರ ಸ್ವರೂಪದ ಗಾಯಾಳುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಇದರಿಂದ ಅಂಥವರ ಪ್ರಾಣ ಉಳಿಸಬಹುದು. ಅಪಘಾತ ನಡೆದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಮೊದಲು ಆ ಗಾಯಾಳುಗಳ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಬೆನ್ನುಹುರಿಗೆ ಪೆಟ್ಟಾಗಿದ್ದಾರೆ ನಾಲ್ಕೈದು ಜನ ಅವರನ್ನು ಸರಿಯಾದ ಕ್ರಮದಲ್ಲಿ ಎತ್ತಿ ಸಾಗಿಸಬೇಕು. ಇಲ್ಲದಿದ್ದಲ್ಲಿ ಪ್ರಾಣಕ್ಕೆ ತೊಂದರೆ ಎದುರಾಗುತ್ತದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಯಾವುದೇ ಕಾರಣಕ್ಕೂ ನೀರು, ಆಹಾರ ಕೊಡಬಾರದು. ಗಾಯಾಳುಗಳನ್ನು ಎಡ ಮಗ್ಗಲಿಗೆ ಮಲಗಿಸಬೇಕು ಎಂದು ತಿಳಿಸಿದರು.

ಸಿಪಿಐಗಳಾದ ಪ್ರಲ್ಹಾದ್ ಆರ್.ಚನ್ನಗಿರಿ, ವಿಕಾಸ್ ಲಮಾಣಿ, ವೆಂಕಟ ಸ್ವಾಮಿ, ಪಿಎಸ್‌ಐ ಸುಬ್ರಹ್ಮಣ್ಯಂ, ನಾಗರತ್ನಮ್ಮ, ಗೀತಾಂಜಲಿ ಶಿಂಧೆ, ತಾರಾಬಾಯಿ, ಬಸವರಾಜ ಅಡವಿಬಾವಿ, ಗೋವಿಂದ ಇತರರಿದ್ದರು.