ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಹೆದ್ದಾರಿ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಅಪಘಾತಗಳನ್ನು ತಡೆದು, ಅಮಾಯಕ ಜೀವಗಳನ್ನು ಕಾಪಾಡಬೇಕು. ಇದಕ್ಕೆ ಹೆದ್ದಾರಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಬೀಡಗಾನಹಳ್ಳಿ ಬಳಿ ಚರಂಡಿ ಕಿರಿದಾಗಿದ್ದು ನೀರು ಸರಾಗವಾಗಿ ಹರಿಯದೆ ಸಂಚಾರಕ್ಕೆ ಪರದಾಡುವಂತಾಗಿದೆ. ಈ ಸಮಸ್ಯೆ ನಿವಾರಿಸಲು ದುರಸ್ತಿಗೆ ಕಾರ್ಯ ಕೈಗೊಳ್ಳಬೇಕು. ಕೋಲಾರ ಮತ್ತು ನಂದಿಬೆಟ್ಟ, ನಂದಿ ಮುದ್ದೇನಹಳ್ಳಿ ಕಡೆಗೆ ತೆರಳಲು ಅನುಕೂಲವಾಗುವಂತೆ ನಂದಿ ಕ್ರಾಸ್ ಬಳಿ ಬೆಂಗಳೂರು ಕಡೆಗೆ ಏರುಮುಖ ಮತ್ತು ಇಳಿಮುಖ ಸಂಪರ್ಕ ರಸ್ತೆ ನಿರ್ಮಿಸಬೇಕು. ಕೆಳ ಸೇತುವೆ ಬಳಿ ಚರಂಡಿ ಅಗಲೀಕರಣವಾಗವೇಕು. ಚದಲುಪರ ಕ್ರಾಸ್ ಬಳಿ ಸರ್ವೀಸ್ ರಸ್ತೆ ದುರಸ್ತಿ ಪಡಿಸಿ, ಎಚ್ಚರಿಕೆ ಫಲಕ ಅಳವಡಿಸಬೇಕು. ಮಹಿಳಾ ಕಾಲೇಜು ಮೇಲ್ಸೇತುವೆಯ ಪಶ್ಚಿಮ ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಅಗತ್ಯವಿದೆ. ಹೊನ್ನೇನಹಳ್ಳಿ ಬಳಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ ಮಾತನಾಡಿ, ಹೊನ್ನೇನಹಳ್ಳಿ ಸಮೀಪದ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಬಿ.ಇಡಿ. ಕಾಲೇಜು, ಮೆಡಿಕಲ್ ಕಾಲೇಜು ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ರೆಡ್ಡಿ, ಮುಖಂಡರಾದ ಮಳ್ಳೂರು ಶಿವಣ್ಣ, ಕೆ.ಎಂ.ರೆಡ್ಡಪ್ಪ, ಮೇಲೂರು ಅಮರ್, ಮುನಿರಾಜು, ಚಂದ್ರಪ್ಪ ಮತ್ತಿತರರು ಹಾಜರಿದ್ದರು.
ಗಮನ ಸೆಳೆದಿದ್ದ ಮುಖಂಡರು
ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕಾಮಗಾರಿ, ಅಪಘಾತ ವಲಯಗಳು ಮತ್ತು ಪರಿಹಾರ ಕೆಲಸಗಳ ಬಗ್ಗೆ
ನಾಗರಿಕ ಹಿತರಕ್ಷಣಾ ಸಮಿತಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಮನವಿ, ಪ್ರತಿಭಟನೆ ಮೂಲಕ ಸಹ ಬೆಳಕು ಚೆಲ್ಲಲಾಗಿತ್ತು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ 44ರಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಧಿಕಾರ, ಪೊಲೀಸ್ ಅಧಿಕಾರಿಗಳು, ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. ಸಮಿತಿ ಪದಾಧಿಕಾರಿಗಳು ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಸಮಸ್ಯೆಗಳ ವರದಿ ಪಡೆದುಕೊಂಡರು. ಹೆದ್ದಾರಿ ಬದಿಗಳಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುವುದು, ಮಂಚನಬಲೆ ಕೆಳಸೇತುವೆ ಪ್ರದೇಶ ಜಲಾವೃತಗೊಳ್ಳುವುದನ್ನು ತಡೆಯುವುದು ಸೇರಿ ವಿವಿಧ ಪರಿಹಾರದ ಕೆಲಸಗಳ ಬಗ್ಗೆ ಸಲಹೆ ನೀಡಲಾಯಿತು.