ದೊಡ್ಡಬಳ್ಳಾಪುರ: ನಗರದಲ್ಲಿ ಒಂದೆಡೆ ಬೀದಿನಾಯಿಗಳ ಹಾವಳಿಯಾದರೆ, ಇನ್ನೊಂದೆಡೆ ರಸ್ತೆ ಮಧ್ಯದಲ್ಲೇ ಝಾಂಡಾ ಊರುವ ಬೀಡಾಡಿ ದನಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಸಾಗುವಾಗ ಹಠಾತ್ತನೆ ಅಡ್ಡ ಬರುವ ಹಸುಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವಾಹನ ಚಾಲಕರು ಅಪಘಾತಗಳಿಗೆ ಈಡಾಗುವುದು ಸಾಮಾನ್ಯವಾಗಿದೆ.
ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ಮಿತಿ ಮೀರಿದೆ. ಈ ಮಾರ್ಗದಲ್ಲಿ ಅಂತಾರಾಜ್ಯಕ್ಕೆ ತೆರಳುವ ವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಲವು ಶಾಲೆ, ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಓಡಾಟವೂ ಹೆಚ್ಚಾಗಿದೆ. ಆದರೆ, ಜಾನುವಾರುಗಳನ್ನು ಮೇಯಲು ಬಿಡುವ ಅವುಗಳ ಮಾಲೀಕರು ಅವನ್ನು ಕರೆದೊಯ್ಯುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ದನಗಳು ರಸ್ತೆಯಲ್ಲೇ ಬೀಡುಬಿಟ್ಟು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡುತ್ತಿವೆ.
ಪಶುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸುವಾಗ ವಾಹನಗಳು ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಅಪಘಾತದ ಭೀತಿಯಲ್ಲೇ ಸಂಚರಿಸುವ ಇತರ ವಾಹನಗಳ ಚಾಲಕರು ಪ್ರಾಣವನ್ನು ಕೈಯಲ್ಲೇ ಹಿಡಿದು ಸಂಚರಿಸುವ ಪರಿಸ್ಥಿತಿ ಇದೆ.
ಬೀಡಾಡಿ ದನಗಳನ್ನು ರಸ್ತೆಯಿಂದ ತೆರವುಗೊಳಿಸುವ ಹೊಣೆ ನಗರಸಭೆ ಅಧಿಕಾರಿಗಳದ್ದೋ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳದ್ದೋ ಎಂಬ ಗೊಂದಲ ಜನರನ್ನು ಕಾಡುತ್ತಿದೆ. ಯಾರದ್ದೇ ಜವಾಬ್ದಾರಿ ಆಗಿದ್ದರೂ, ಪಶುಗಳನ್ನು ರಸ್ತೆಯಿಂದ ತೆರವುಗೊಳಿಸಿದರೆ ಸಾಕು ಎಂಬುದು ಸಾರ್ವಜನಿಕರ ಬಯಕೆಯಾಗಿದೆ.
ರಾತ್ರಿ ಹುಟ್ಟಿಕೊಳ್ಳುವ ಮಾಲೀಕರು: ಬೆಳಗಿನ ವೇಳೆ ರಸ್ತೆಗಳಲ್ಲಿ ಝಾಂಡಾ ಊರುವ ಪಶುಗಳಿಗೆ ಮಾಲೀಕರೇ ಇರುವುದಿಲ್ಲ. ಆದರೆ, ರಾತ್ರಿ ಆಗುತ್ತಿದ್ದಂತೆ ಅವುಗಳಿಗೆ ಮಾಲೀಕರು ಹುಟ್ಟಿಕೊಳ್ಳುತ್ತಾರೆ. ಅವನ್ನು ಮನೆಗೆ ಕರೆದೊಯ್ದು ಜೋಪಾನ ಮಾಡುತ್ತಾರೆ. ಆದರೆ, ಬೆಳಗಿನ ವೇಳೆ ಮಾತ್ರ ಅವುಗಳ ಬಗ್ಗೆ ಕಾಳಜಿ ಮಾಡದೆ, ರಸ್ತೆಯಲ್ಲೇ ಇರಲು ಬಿಡುವ ಅವರು ವಾಹನ ಸವಾರರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಎಲ್ಲ ದನಗಳಿಗೂ ವಿಮೆ ಮಾಡಿಸಿರಲಾಗುತ್ತದೆ. ಪ್ರತ್ಯೇಕ ಕೊಟ್ಟಿಗೆ ಅಥವಾ ಹುಲ್ಲುಗಾವಲಿನಲ್ಲಿ ಅವನ್ನು ಮೇಯಿಸುವ ಬದಲು ರಸ್ತೆ ಮೇಲೆ ಬಿಡುವ ಅವುಗಳ ಮಾಲೀಕರನ್ನು ಗುರುತಿಸಿ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗುವ ಅವನ್ನು ಹಿಡಿದು, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಬರುವ ಜನರು ನಿಲ್ಲಿಸುವ ಬೈಕ್ ಮತ್ತು ಕಾರುಗಳಿಗೂ ದನಗಳು ಹಾನಿ ಮಾಡುತ್ತವೆ. ಇದರಿಂದಾಗಿ ಅವುಗಳ ಮಾಲೀಕರು ದುಬಾರಿ ಬೆಲೆ ತೆತ್ತು ಅವನ್ನು ದುರಸ್ತಿ ಮಾಡಿಸುವುದು ಅನಿವಾರ್ಯವಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ದನಗಳ ಮಾಲೀಕರನ್ನು ಗುರುತಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನರಸಿಂಹಮೂರ್ತಿ ಲಕ್ಷ್ಮೀದೇವಿಪುರ ನಿವಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದನಗಳ ಹಾವಳಿ ಬಗ್ಗೆ ಬುಧವಾರ ಪರಿಶೀಲನೆ ನಡೆಸುತ್ತೇನೆ. ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡುತ್ತೇನೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾನುವಾರು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಮೇಶ್ ಸುಣಗಾರ್, ನಗರಸಭೆ ಆಯುಕ್ತ