ಮದ್ದೂರು: ತಾಲೂಕಿನ ಸೋಮನಹಳ್ಳಿ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಯ ಎಸ್.ಸಿ. ಮಲ್ಲಯ್ಯ ಶಿಕ್ಷಣ ಸಂಸ್ಥೆ ಮುಂದೆ ಮೇಲ್ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಂಗಳವಾರ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಕುರಿ, ಮೇಕೆಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ವಾಟಾಳ್ ನಾಗರಾಜ್ ಮಾತನಾಡಿ, ಸೋಮನಹಳ್ಳಿಯ ಎಸ್.ಸಿ.ಮಲ್ಲಯ್ಯ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆದ್ದಾರಿ ದಾಟಲು ತೊಂದರೆಯಾಗುತ್ತಿದೆ. ಸಂಸ್ಥೆಯ ಎದುರು ಗುತ್ತಿಗೆದಾರರು ಒಂದು ತಿಂಗಳೊಳಗೆ ಮೇಲ್ಸೆತುವೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.