ಜಿಲ್ಲೆ

ಹೆದ್ದಾರಿ ಮೇಲ್ಸೇತುವೆ ಬ್ಲಾಕ್‌ಗಳು ಕುಸಿತ

ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 373ರ ಮೇಲ್ಸೇತುವೆಯ ಸಿಮೆಂಟ್ ಬ್ಲಾಕ್‌ಗಳು ಗುರುವಾರ ತಡರಾತ್ರಿ ಬಿದ್ದಿದ್ದು, ಹೆದ್ದಾರಿಯೇ ಸಂಪೂರ್ಣ ಕುಸಿದು ಬೀಳುವ ಭೀತಿ ಎದುರಾಗಿದೆ.


ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮೇಲ್ಸೇತುವೆ ತಳಪಾಯದ ಮಣ್ಣು ಸಡಿಲಗೊಂಡು ಬ್ಲಾಕ್‌ಗಳು ಕುಸಿದು ಬಿದ್ದಿವೆ ಎನ್ನಲಾಗಿದೆ. ಈ ಮೇಲ್ಸೇತುವೆ ಸಂಪೂರ್ಣ ಕುಸಿತವಾದರೆ ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೇಲೂರು- ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮೇಲ್ಸೇತುವೆ ತಡೆಗೋಡೆ ಕುಸಿಯುವುದು ಸಾಮಾನ್ಯವಾಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮೇಲ್ಸೇತುವೆಯ ತಳಪಾಯದ ಮಣ್ಣು ಹೊರಕ್ಕೆ ಬರುತ್ತಿದ್ದು, ಅಪಾಯ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ವಾಹನ ಸಂಚಾರಕ್ಕೆ ನಿರ್ಬಂಧ: ಹೆದ್ದಾರಿಯಲ್ಲಿನ ಮೇಲ್ಸೇತುವೆ ಕುಸಿತ ಹಿನ್ನೆಲೆಯಲ್ಲಿ ಈ ಮಾರ್ಗದ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಮಳೆ ಹೆಚ್ಚಾದರೆ ಮೇಲ್ಸೇತುವೆ ಮತ್ತಷ್ಟು ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕೆ ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ನಾಮಫಲಕ ಅಳವಡಿಸಲಾಗಿದೆ. ಹಂಗರಹಳ್ಳಿಯಿಂದ ಪಡುವಲಹಿಪ್ಪೆ ಮೂಲಕ ಹೊಳೆನರಸೀಪುರಕ್ಕೆ ಹೋಗಿ, ಮೈಸೂರಿಗೆ ತೆರಳುವಂತೆ ವಾಹನ ಸವಾರರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.


ರೇವಣ್ಣ ಸ್ಥಳಕ್ಕೆ ಭೇಟಿ: ಹಂಗರಹಳ್ಳಿಯ ಬಳಿ ಕುಸಿದಿರುವ ಮೇಲ್ಸೇತುವೆ ಸ್ಥಳಕ್ಕೆ ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸೇತುವೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಹಿಂದೆ ಹಲವು ಬಾರಿ ಕುಸಿತವಾಗಿತ್ತು. ಗುಣಮಟ್ಟವಿರದ ಈ ಸೇತುವೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿಯವರೆಗೂ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿರುವುದಿಲ್ಲ. ಇದನ್ನು ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ ಕಾಮಗಾರಿಯ ಅನುಭವ ಇದೆಯೋ, ಇಲ್ಲವೋ ಗೊತ್ತಿಲ್ಲ. ಈ ರೀತಿ ನಿರ್ಮಾಣ ಮಾಡಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಹಾಗೂ ಎಚ್.ಡಿ.ದೇವೇಗೌಡರು ಕೇಂದ್ರದ ರೈಲ್ವೆ ಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಕೂಡಲೇ ರೈಲ್ವೆ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ಇದರಿಂದ ಬಹಳ ತೊಂದರೆಯಾಗಿದ್ದು ಕೂಡಲೇ ರೈಲ್ವೆ ಗೇಟ್ ಅನ್ನು ಓಪನ್ ಮಾಡಿ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಡಬೇಕು. 40 ಅಡಿ ಎತ್ತರವಿರುವ ಈ ಸೇತುವೆಯನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.