ಅಣ್ಣಿಗೇರಿ: ನ್ಯಾಯಾಲಯದ ಆದೇಶದನ್ವಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಪಟ್ಟಣದ ಕೆಲ ಧಾರ್ವಿುಕ ಕೇಂದ್ರಗಳನ್ನು ಬುಧವಾರ ತೆರವುಗೊಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ-63ರ ಪಕ್ಕದಲ್ಲಿದ್ದ ಪಟ್ಟಣದ ಹನುಮಂತ ದೇವಸ್ಥಾನ, ರಾಮಸೀತಾ ಮಂದಿರ ಹಾಗೂ ಹಳೇ ಅಮೃತೇಶ್ವರ ನಗರದಲ್ಲಿರುವ ಮಾಬುಸುಬಾನಿ ದರ್ಗಾವನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಸೀಲ್ದಾರ್ ಕೊಟ್ರೇಶ್ ಗಾಳಿ ನೇತೃತ್ವದಲ್ಲಿ ತೆರವುಮಾಡಲಾಯಿತು. ಮುಂಜಾಗ್ರತೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನಗಳನ್ನು ತೆರವು ಗೊಳಿಸುವ ಮುನ್ನ ದೇವರ ಮೂರ್ತಿಗಳನ್ನು ಹಳೆಯ ಅಮೃತೇಶ್ವರ ದೇವಸ್ಥಾನದಲ್ಲಿಟ್ಟು ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಂದಾಯ ಇಲಾಖೆ ಅಧಿಕಾರಿ ಅರುಣ ಕರಿಶಂಕರಿ, ನವಲಗುಂದ ಸಿಪಿಐ ಸಿ.ಜಿ. ಮಠಪತಿ, ಅಣ್ಣಿಗೇರಿಯ ಠಾಣಾಧಿಕಾರಿ ಎಲ್.ಕೆ. ಜೂಲಿಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಸ್ಥಳೀಯ ತಾಲೂಕು ಅಧಿಕಾರಿಗಳು ಇದ್ದರು.