ಕೋಲಾರ: ಬೆಂಗಳೂರು - ಚೆನೈ ಎಕ್ಸ್ಪ್ರೆಸ್ ಎಕ್ಸ್ಪ್ರೆಸ್ ಹೈವೇ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹೆದ್ದಾರಿಗೆ ಜಮೀನು ಕಳೆದುಕೊಂಡ ರೈತರಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಿ, ಅಗತ್ಯವಾದರೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರ ರಕ್ಷಣೆ ಪಡೆದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್(ಬೈರತಿ) ಅಧಿಕಾರಿಗಳಿಗೆ ನಿರ್ದೇಶಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬೆಂಗಳೂರು-ಚೆನೈ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದ ಪ್ರಗತಿ ಮತ್ತು ರಾಷ್ಟ್ರೀಯ ಹೆದ್ದಾರಿ ೭೫ ರ ನಿರ್ವಹಣೆ ಮತ್ತು ಅದರಲ್ಲಿನ ಲೋಪಗಳು ಕುರಿತಂತೆ ಸೋಮವಾರ ಅಯೋಜಿಸಿದ್ದ ಜಿಲ್ಲೆಯ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗುವ ಕಾರಿಡಾರ್ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಗಬೇಕು ಎಂದು ಸೂಚಿಸಿದರು.
ಎಕ್ಸ್ಪ್ರೆಸ್ ಹೈವೇ ಜಿಲ್ಲೆಯಲ್ಲಿ ೫೬ ಕಿಮೀ ಹಾದುಹೋಗುತ್ತದೆ. ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ೩ ಡೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿಯೇ ನಿರ್ಮಾಣ ಕಾರ್ಯಕ್ಕೆ ಸಲ್ಪಮಟ್ಟಿಗೆ ಹಿನ್ನಡೆಯಾಗಿದೆ ಎಂದು ಎಕ್ಸ್ಪ್ರೆಸ್ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಜಮೀನಿನ ಮಾಲೀಕರು ಅಡ್ಡಿ ಪಡಿಸುತ್ತಿದ್ದು, ಪೊಲೀಸ್ ಇಲಾಖೆ ನೆರವು ನೀಡಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೆದ್ದಾರಿ ಪ್ರಾಧಿಕಾರಕ್ಕೆ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು. ಈ ಹೆದ್ದಾರಿ ಶೀಘ್ರ ಪೂರ್ಣಗೊಳಿಸಲು ಎಲ್ಲರು ಸಹಕರಿಸುವುದು ಅತ್ಯಗತ್ಯ ಎಂದು ಹೇಳಿದರು.
ಇನ್ನು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ * ೭೫ ರ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ರಸ್ತೆಯಲ್ಲಿ ಯಾವುದಾದರು ಲೋಪ ದೋಷಗಳಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಅಭಿಯಂತರರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ, ನಗರಾಭಿವೃದ್ದಿ ಇಲಾಖೆಯ ಉಪ ಕಾರ್ಯದರ್ಶಿ ರಘುನಂದನ್, ರಾಷ್ಟ್ರೀಯ ಹೆದ್ದಾರಿಯ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು - ಚೆನೈ ಎಕ್ಸ್ಪ್ರೆಸ್ ಹೆದ್ದಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊಳತ್ತೂರು ಬಳಿ ಆರಂಭವಾಗಿ ಚೆನೈನ ಶ್ರೀಪೆರಂಬದೂರ್ ವರೆಗೂ ಸಾಗಲಿದೆ. ಒಟ್ಟು ೨೮೫ ಕಿಮೀ ಉದ್ದದ ಹೆದ್ದಾರಿ ಇದಾಗಿದ್ದು, ರಾಜ್ಯದಲ್ಲಿ ೭೭.೨೩ ಕಿಮೀ ಸಾಗಲಿದೆ. ಆಂಧ್ರಪ್ರದೇಶದಲ್ಲಿ ೯೧ ಕಿಮೀ ಹಾಗೂ ತಮಿಳುನಾಡಿನಲ್ಲಿ ೧೧೬.೬೦ ಕಿಮೀ ರಸ್ತೆ ನಿಮಾಣವಾಗುತ್ತಿದೆ. ಯೋಜನಾ ವೆಚ್ಚ ಅಂದಾಜು ೪೦ ಸಾವಿರ ಕೋಟಿ ರೂಪಾಯಿಗಳಾಗಲಿದ್ದು, ಕೇಂದ್ರ ಸರ್ಕಾರದ ಪಾಲು ಶೇ. ೪೦ ರಷ್ಟು ಇದ್ದು, ಪಿಪಿಟಿ ಮಾಡಲ್‌ನಲ್ಲಿ ಶೇ.೬೦ ರಷ್ಟು ಇರುತ್ತದೆ. ಜಿಲ್ಲೆಯಲ್ಲಿ ಮಾಲೂರು, ಬಂಗಾರಪೇಟೆ, ಕೆಜಿಎಫ್ ಹಾಗೂ ಬೇತಮಂಗಲ ಮೂಲಕ ಹಾದು ಹೋಗಲಿದೆ.