ಶಹಾಬಾದ್: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೧೫೦ರ ವಾಡಿ ಕ್ರಾಸ್‌ನಿಂದ ರಾಜ್ಯ ಹೆದ್ದಾರಿ ೧೨೫ ಮೂಲಕ ನಗರ ಪ್ರವೇಶಿಸಲು ಪ್ರಯಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ್ದರಿಂದ ಬೇಸತ್ತ ಆಟೋ, ಟಂಟಂ ಚಾಲಕರೇ ಸ್ವಂತ ಖರ್ಚಿನಲ್ಲಿ ತಗ್ಗು-ಗುಂಡಿಗಳನ್ನು ಮುಚ್ಚಿಸಿ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕಳೆದ ವರ್ಷ ನಗರಕ್ಕೆ ಪ್ರವೇಶಿಸುವ ರಾಜ್ಯ ಹೆದ್ದಾರಿ ೧೨೫ರ ಜೆ.ಪಿ. ಕಾಲನಿಯಿಂದ ಬಸವೇಶ್ವರ ವೃತ್ತದವರೆಗೆ ಡಾಂಬರ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಣಮಟ್ಟದ ಕೆಲಸ ಆಗಿರಲಿಲ್ಲ. ಕೇವಲ ಎಂಟು ದಿನಗಳಲ್ಲಿಯೇ ತೆಗ್ಗು ಬಿದ್ದು ರಸ್ತೆ ಕಿತ್ತು ಹೋಗಿತ್ತು.
ನಂತರ ರಸ್ತೆ ಮರು ನಿರ್ಮಾಣವಾಗದೆ ಈ ಮಾರ್ಗವಾಗಿ ಬೃಹತ್ ಗಾತ್ರದ ವಾಹನಗಳ ಸಂಚಾರದಿಂದ ವಿಪರೀತ ತೆಗ್ಗು-ಗುಂಡಿಗಳಲ್ಲಿ ಸಂಚಾರ ಸರ್ಕಸ್ ಮಾಡುವಂತಾಗಿದ್ದು, ಇತ್ತೀಚಿನ ಮಳೆಯಿಂದ ರಸ್ತೆಯುದ್ದಕ್ಕೂ ತಗ್ಗುಗಳಲ್ಲಿ ನೀರು ನಿಂತು ರಸ್ತೆ ಯಾವುದು, ತಗ್ಗು ಯಾವುದು ಎಂಬ ಗೊಂದಲದಲ್ಲಿ ಸವಾರರು ಸಿಲುಕುವಂತಾಗಿತ್ತು. ಪ್ರತಿದಿನ ದ್ವಿಚಕ್ರ ವಾಹನ ಚಾಲಕರು ಮಕ್ಕಳೊಂದಿಗೆ ಬೀಳುವುದು ಸಾಮಾನ್ಯವಾಗಿತ್ತು.
ಈ ಮಾರ್ಗವಾಗಿ ಆಟೋ, ಟಂಟಂ ಚಾಲಕರು ಶಾಲಾ ಮಕ್ಕಳು, ಸುತ್ತಲಿನ ಗ್ರಾಮಸ್ಥರನ್ನು ಸಾಗಿಸುವುದು ದೊಡ್ಡ ಸಾಹಸ ಎನ್ನುವಂತಾಗಿತ್ತು. ಕೈಯಲ್ಲಿ ಜೀವ ಹಿಡಿದು ವಾಹನ ಚಲಾಯಿಸುತ್ತಿದ್ದ ಆಟೋ, ಟಂಟಂ ಚಾಲಕರು ನಿತ್ಯದ ಯಾತನೆಯಿಂದ ಬೇಸತ್ತು ಸ್ಥಳೀಯ ಕಲ್ಲು ಗಣಿಗಳ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ಸ್ವಂತ ಖರ್ಚಿನಿಂದ ತಂದು ಜೆ.ಪಿ. ಕಾರ್ಖಾನೆ ಪಕ್ಕ, ರೈಲ್ವೆ ಹಳಿ ಸೇತುವೆ, ಬಸವೇಶ್ವರ ವೃತ್ತದಲ್ಲಿ ಹಾಕಿ ತಗ್ಗುಗಳನ್ನು ತುಂಬಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಆಟೋ ಚಾಲಕರ ಕಾರ್ಯವನ್ನು ಸಾರ್ವಜನಿಕರು ಶ್ಲಾಗಿಸಿದ್ದು, ಮುಂದಿನ ದಿನಗಳಲ್ಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.