ಜಿಲ್ಲೆ

ಹೆದ್ದಾರಿ ಕಾಮಗಾರಿಗೆ ಚಾಲನೆ 19ಕ್ಕೆ

ಬೀದರ್: ಔರಾದ್-ಬೀದರ್ ಹಾಗೂ ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಇದೇ 19ರಂದು ಚಾಲನೆ ಸಿಗಲಿದೆ. ನವದೆಹಲಿಯಿಂದ ವರ್ಚುವಲ್ ಮೂಲಕ ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕಾಮಗಾರಿಗಳಿಗೆ ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಬೀದರ್-ಔರಾದ್ (161-ಎ) 52 ಕಿಮೀ ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಮಂಜೂರಿ ಪಡೆದಿದ್ದು, 335 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿದೆ. ಈ ಹೆದ್ದಾರಿ ಟೆಂಡರ್ ಪ್ರಕ್ರಿಯೆ ಕಳೆದ ಜುಲೈ 1ಕ್ಕೆ ಮುಗಿದು ಅರ್ಹತೆಯುಳ್ಳ ಕಂಪನಿಯವರಿಗೆ ಕಾಮಗಾರಿ ಸಿಗಬೇಕಾಗಿತ್ತು. ಆದರೆ ಹೈದರಾಬಾದ್ ಮೂಲದ ಟ್ರ್ಯಾಕ್ ಆ್ಯಂಡ್ ಟವರ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಟೆಂಡರ್ನಲ್ಲಿ ಪಾಲ್ಗೊಂಡಿದ್ದರು. ಆದರೆ ಇವರನ್ನು ತಾಂತ್ರಿಕ ಕಾರಣಗಳಿಂದ ಟೆಂಡರ್ ನಿಂದ ಹೊರಗಿಡಲಾಗಿತ್ತು. ಈ ವಿಷಯ ಮುಂದಿಟ್ಟುಕೊಂಡು ಕಂಪನಿಯು ದೆಹಲಿ ಹೈಕೋಟ್೯ ನಿಂದ ತಡೆ ಆದೇಶ ತಂದಿದ್ದರು. ಆದರೆ ಕೋಟ್೯ ನಲ್ಲಿ ಸರ್ಕಾರದ ಪರವಾಗಿ ಆದೇಶ ಬಂದಿದ್ದು, ಟ್ರಾಕ್ ಆ್ಯಂಡ್ ಟವರ್ ಕಂಪನಿಗೆ ಛೀಮಾರಿ ಹಾಕಿ ಅವರ ಮನವಿ ತಿರಸ್ಕಾರ ಮಾಡಿದೆ. ಸರ್ಕಾರಕ್ಕೆ ಈ ಹೆದ್ದಾರಿಯ ವಿಚಾರದಲ್ಲಿ ಗೆಲುವಾಗಿದೆ. ಹೀಗಾಗಿ 19ರಂದು ಕಾಮಗಾರಿ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಖೂಬಾ ತಿಳಿಸಿದ್ದಾರೆ.