ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ತೇಜಸ್ವಿ ಚಿತ್ರಮಂದಿರದಿಂದ ಹೊರಟ ಪ್ರತಿಭಟನಾಕಾರರು, ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಕಲ್ಪಿತ ಶವಯಾತ್ರೆಯನ್ನು ಆ್ಯಂಬುಲೆನ್ಸ್‌ನೊಂದಿಗೆ ಹೇಮಾವತಿ ಸೇತುವೆಯಿಂದ ಹಳೇ ಬಸ್ ನಿಲ್ದಾಣದವರೆಗೆ ನಡೆಸಿ ಶವವನ್ನು ಸುಟ್ಟು ಹಾಕಿದರು.
ನಂತರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ, ಹಾಸನದಿಂದ ಮಾರನಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವ ರಾಜ್‌ಕಮಲ್ ಕಂಪನಿ ಕಾಮಗಾರಿಯನ್ನು ಬಹಳ ವಿಳಂಬವಾಗಿ ಮಾಡುತ್ತಿದೆ. ಬಾಳ್ಳುಪೇಟೆಯಿಂದ ಮಾರನಹಳ್ಳಿವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಮರು ಡಾಂಬರೀಕರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ ಕಾರ್ಯವನ್ನು ಹೆದ್ದಾರಿ ಪ್ರಾಧಿಕಾರದವರು ನಡೆಸದಿರುವುದರಿಂದ ಪಟ್ಟಣದ ಒಳಭಾಗದಲ್ಲಿ ಹೋಗಿರುವ ರಸ್ತೆ ಸಂಪೂರ್ಣ ಗುಂಡಿಯಾಗಿದೆ ಹಾಗೂ ಹೇಮಾವತಿ ನದಿ ಸೇತುವೆಯ ಮೇಲ್ಭಾಗದಲ್ಲಿ ಡಾಂಬರ್ ಮಳೆಯಿಂದಾಗಿ ಕಿತ್ತು ಹೋಗಿದ್ದು, ಅದನ್ನು ಕೂಡಲೆ ದುರಸ್ತಿ ಮಾಡಿಸಬೇಕು. ಇನ್ನೊಂದು ತಿಂಗಳ ಒಳಗೆ ಬಾಳ್ಳುಪೇಟೆಯಿಂದ ಸಕಲೇಶಪುರ ಮಾರನಹಳ್ಳಿವರೆಗಿನ ರಸ್ತೆಗೆ ಮರುಡಾಂಬರೀಕರಣ ಮಾಡಲು ಒಂದು ತಿಂಗಳ ಕಾಲವಕಾಶ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಮಾತನಾಡಿದರು. ಪ್ರತಿಭಟನೆಯ ನಂತರ ಕಾರ್ಯಕರ್ತರು ಹಾಸನಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ 75ನ್ನು ಮರು ಡಾಂಬರೀಕರಣ ಮಾಡುವಂತೆ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ವೀರೇಶ್, ಹರೀಶ್, ಶರಣ್, ಬೆಳಗೋಡು ಬಸವರಾಜ್, ರವಿನಾರಾಯಣ, ಕೃಷ್ಣಪ್ಪ ಪೂಜಾರಿ ಮತ್ತಿತರರು ಹಾಜರಿದ್ದರು.