ಜಿಲ್ಲೆ

ಹೆತ್ತೂರಿನಲ್ಲಿ ನಾಳೆ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಹಾಸನ: ಸಕಲೇಶಪುರ ತಾಲೂಕು ಹೆತ್ತೂರಿನ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದ ಡಾ.ಸಿದ್ದಲಿಂಗಯ್ಯ ಮಹಾವೇದಿಕೆಯಲ್ಲಿ ಮಾ.23 ಮತ್ತು 24 ರಂದು ಎರಡು ದಿನಗಳ ಕನ್ನಡ ಉತ್ಸವ ನಡೆಯಲಿದೆ. 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಅವರು ಉದ್ಘಾಟಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶಗೌಡ ತಿಳಿಸಿದರು.
ಶನಿವಾರ ದಿನ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 8.30 ಕ್ಕೆ ಸಮ್ಮೇಳನ ಆವರಣದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕನ್ನಡ ಜಾಗೃತಿ ಜಾಥಾ ಹಾಗೂ ಸಮ್ಮೇಳನಾಧ್ಯಕ್ಷರಾದ ಶೈಲಜಾ ಹಾಸನ ಅವರ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಚಾಲನೆ ನೀಡಲಿದ್ದು, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಒಒ ಡಾ.ಬಿ.ಆರ್.ಪೂರ್ಣಿಮಾ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವಿಶೇಷವಾಗಿ ಇತ್ತೀಚಿಗೆ ಸಾವಿಗೀಡಾದ ಅಂಬಾರಿ ವೀರ ಅರ್ಜುನ ಆನೆ ಹೆಸರನ್ನು ಮಹಾದ್ವಾರಕ್ಕೆ ಇಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮ್ಮೇಳನದ ಸಾನಿಧ್ಯವನ್ನು ಹಾಸನ, ಕೊಡಗು ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಅವರು ವಹಿಸುವರು. ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತಿ ಇರಲಿದ್ದು, ಹಾಸನ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಆಶಯ ನುಡಿಗಳನ್ನು ಆಡಲಿದ್ದು, ರಮಾ ಸಿದ್ದಲಿಂಗಯ್ಯ ಅವರು ಮಹಾ ವೇದಿಕೆ ಉದ್ಘಾಟನೆ ಮಾಡಿದರೆ, ಖ್ಯಾತ ಸಾಹಿತಿ, ಜಾನಪದ-ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಕಾಳೇಗೌಡ ನಾಗವಾರ ಅವರು ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆ ನೆರವೇರಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ನುಡಿ ಸಂದೇಶ ನೀಡುವರು, ನಿವೃತ್ತ ಐಎಎಸ್ ಅಧಿಕಾರಿ ವೈ.ಕೆ.ಮುದ್ದುಕೃಷ್ಣ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಗಾನ ಕಲಾಭೂಷಣ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಅವರ ನುಡಿ ನಂತರ ಸಮ್ಮೇಳನಾಧ್ಯಕ್ಷರಾದ ಶೈಲಜಾ ಹಾಸನ್ ಮಾತನಾಡುವರು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ:
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹೆತ್ತೂರಿನ ವೈದ್ಯ ಡಾ. ಅಪ್ಪಸ್ವಾಮಿಗೌಡ, ಅರಕಲಗೂಡು ತಾಲೂಕು ದೊಡ್ಡಮಗ್ಗೆಯ ಡಾ.ಎಂ.ಸಿ.ರಂಗಸ್ವಾಮಿ, ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಪಿ.ಮೋಹನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಬ್ಬು ಹೊಲೆಯಾರ್ ಹಾಗೂ ಮೈಸೂರಿನ ಜಯದೇವ ಹೃದ್ರೋಗ ತಜ್ಞರಾದ ಡಾ.ಶ್ರೀನಿಧಿ ಹೆಗಡೆ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು ಎಂದರು.
ಮಧ್ಯಾಹ್ನದ ನಂತರ ಎರಡು ಗೋಷ್ಠಿಗಳು ನಡೆಯಲಿವೆ. ನಂತರ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ ಉದ್ಘಾಟನೆ ನೆರವೇರಿಸುವರು ಎಂದರು.
ಮಾ.24ರ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮೂರು ಗೋಷ್ಠಿಗಳು, ಕವಿಗೋಷ್ಠಿ ನಡೆಯಲಿವೆ. ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಡಾ.ಎಚ್.ಎಲ್.ಮಲ್ಲೇಶಗೌಡ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್, ಬಿ.ಆರ್.ಬೊಮ್ಮೇಗೌಡ ನಿರ್ಣಯ ಮಂಡಿಸುವರು. ಜಿಲ್ಲಾ ಕಸಾಪ ಪದಾಧಿಕಾರಿಗಳು ಉಪಸ್ಥಿತರಿರುವರು. ಸಂಜೆ 5 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ನಾಡಿನ ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಮಾರೋಪ ನುಡಿಗಳನ್ನಾಡುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಹುಲ್ಲೇನಹಳ್ಳಿ ರಾಜೇಶ್ವರಿ, ಕಸಾಪ ಪದಾಧಿಕಾರಿಗಳಾದ ಜಯರಾಂ, ಬಿ.ಆರ್.ಬೊಮ್ಮೇಗೌಡ, ಶಂಕರ್, ವನಜಾ ಸುರೇಶ್ ಇದ್ದರು.