ಜಿಲ್ಲೆ

ಹೆತ್ತವರ ಮಡಿಲು ಸೇರಿದ ಮಕ್ಕಳು

ಧಾರವಾಡ: ಲಾಕ್​ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದ 10 ವರ್ಷದ ರೋಮುಕುಮಾರಿ, 8 ವರ್ಷದ ಪೋಸುಕುಮಾರಿ ಶುಕ್ರವಾರ ರಾತ್ರಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಂದೆ-ತಾಯಿ ಮಡಿಲು ಸೇರಿದ್ದಾರೆ.

50 ದಿನಗಳಿಂದ ಹೆತ್ತವರಿಂದ ದೂರವಿದ್ದ ಬಾಲಕಿಯರನ್ನು ಅವರ ಪಾಲಕರನ್ನು ಸೇರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಸೇರಿ ಹಲವರು ವಿಶೇಷ ಪ್ರಯತ್ನ ಮಾಡಿದ್ದರು. ಮೇ 7ರಂದು ಜಿಲ್ಲಾಧಿಕಾರಿ ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟಿದ್ದರು. ರಮೇಶ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಪಾಲಕರಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಡಿಸಿ ಭಗವತಿ ಪ್ರಸಾದ ಅವರು ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.