ಹಾಸನ: ಮಕ್ಕಳು ಹೆತ್ತ ತಂದೆ-ತಾಯಿಯ ತ್ಯಾಗವನ್ನು ಎಂದೂ ಮರೆಯಬಾರದು ಎಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ಬಿಎ, ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಒಂದು ದಿನದ ಅಭಿವಿನ್ಯಾಸ ಮತ್ತು ಎಲ್‌ಎಂಎಸ್ ಕರ್ನಾಟಕ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಕ್ಷಣವೂ ತಂದೆ-ತಾಯಿ ತಮ್ಮ ಮಕ್ಕಳ ಬಗ್ಗೆ ತುಡಿಯುತ್ತಿರುತ್ತಾರೆ. ಅವರ ಆಸೆ-ಆಕಾಂಕ್ಷೆಗಳನ್ನು ನಿರಾಸೆಗೊಳಿಸದೆ ಪ್ರತಿಯೊಬ್ಬ ಮಕ್ಕಳು ಸ್ವಾತಿಮುತ್ತುಗಳಾಬೇಕು. ನಾವು ನಾವಾಗಿ ಬಾಳಬೇಕು. ತಂದೆ-ತಾಯಿಯ ತ್ಯಾಗಕ್ಕೆ ಸ್ಪಂದಿಸುವ ಶಿಕ್ಷಣವನ್ನು ನಾವು ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಶೈಕ್ಷಣಿಕ ಡೀನ್ ಡಿ.ಎಸ್. ರಾಜು ಮಾತನಾಡಿ, ನಮ್ಮ ಕಾಲೇಜು ಮೂರು ಬಾರಿ ನ್ಯಾಕ್ ಮಾನ್ಯತೆಗೆ ಒಳಪಟ್ಟಿದೆ. ಶೈಕ್ಷಣಿಕ ಗುಣಮಟ್ಟದಲ್ಲಿ ಹಾಸನ ಜಿಲ್ಲೆಯಲ್ಲಿ ಮೊದಲ ಸ್ವಾಯತ್ತ ಕಾಲೇಜಾಗಿದೆ. ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಉತ್ತಮ ಗುಣಮಟ್ಟದ ಬೋಧನಾ ಸಾಮರ್ಥ್ಯವನ್ನು ನಮ್ಮ ಕಾಲೇಜು ಹೊಂದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಕನ್ನಡ ವಿಭಾಗದ ಪ್ರೊ. ಎಚ್.ಡಿ. ದೇವರಾಜು, ಇಂಗ್ಲಿಷ್ ವಿಭಾಗದ ಪ್ರೊ. ಕೆ.ಎನ್. ರಮೇಶ್, ವಾಣಿಜ್ಯಶಾಸ್ತ್ರ ವಿಭಾಗದ ಡಾ.ಸವಿತಾ, ಇತಿಹಾಸ ವಿಭಾಗದ ಪ್ರೊ. ಬಸವೇಗೌಡ, ಅರ್ಥಶಾಸ್ತ್ರ ವಿಭಾಗದ ಡಾ. ಕೆ.ಡಿ.ಮುರಳೀಧರ್, ರಾಜ್ಯಶಾಸ್ತ್ರ ವಿಭಾಗದ ಡಾ. ಕೆ.ವಿ. ಪಾರ್ಥೇಶ್, ಸಮಾಜಶಾಸ್ತ್ರ ವಿಭಾಗದ ಮಂಜುನಾಥ್, ಪತ್ರಿಕೋದ್ಯಮ ವಿಭಾಗದ ಎ.ವಿ ರಶ್ಮಿ, ಭೂಗೋಳಶಾಸ್ತ್ರ ಮತ್ತು ಪರಿಸರ ಅಧ್ಯಯನ ವಿಭಾಗದ ರಾಮಣ್ಣ, ಹಿಂದಿ ವಿಭಾಗದ ಬಿ.ಆರ್.ಮಾಲತಿ, ಗಣಕ ವಿಜ್ಞಾನ ವಿಭಾಗದ ಗೋಪಾಲ್ ಇತರರು ಇದ್ದರು.