ಜಿಲ್ಲೆ

ಹೆತ್ತವರ ಋಣ ತೀರಿಸುವುದು ಅಸಾಧ್ಯ

ವಿದ್ಯಾ ಶೆಟ್ಟನಗೌಡ್ರ

ಅಥಣಿ ಗ್ರಾಮೀಣ: ವಿದ್ಯೆ ಕಲಿತು ಎಷ್ಟೇ ಎತ್ತರಕ್ಕೆ ಬೆಳೆದರೂ ಹೆತ್ತವರ ಹಾಗೂ ಹುಟ್ಟಿದ ಊರಿನ ಋಣ ತೀರಿಸಲು ಸಾಧ್ಯವಿಲ್ಲ. ಧಾರ್ಮಿಕ ಚಿಂತನೆಗಳು ಬದುಕನ್ನು ಹಸನಗೊಳಿಸುತ್ತವೆ ಎಂದು ಕೌಲಗುಡ್ಡ ಸಿದ್ಧಸಿರಿ ಆಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಸುಕ್ಷೇತ್ರ ರಾಮತೀರ್ಥ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಕರಿಸಿದ್ಧೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಕಟ್ಟಡ ಉದ್ಘಾಟನಾ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿ ವಿದ್ಯಾವಂತರು ಸಾಕಷ್ಟಿದ್ದು ಹೃದಯವಂತರು ವಿರಳವಾಗಿದ್ದಾರೆ. ಎಲ್ಲರಿಗೂ ಸಿರಿವಂತಿಕೆ ಮತ್ತು ಸ್ವಂತಿಕೆ ಬೇಕಾಗಿದೆ. ಅವಿಭಕ್ತ ಕುಟುಂಬ ಮಾಯವಾಗಿ ಗಂಡ-ಹೆಂಡತಿ ತನ್ನ ಮಕ್ಕಳಷ್ಟೇ ಜೀವನ ಸಾಕು, ಹೆತ್ತ ತಂದೆ ಬೇಡವಾಗಿ ವೃದ್ಧಾಶ್ರಮ ಸಂಖ್ಯೆ ಹೆಚ್ಚುತ್ತಿರುವದು ವಿಷಾದನೀಯ ಎಂದರು.

ಮುಖಂಡ ಚಿದಾನಂದ ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಾಲುಮತ ಸಮುದಾಯ ಮುಂಚೂಣಿಯಲ್ಲಿದೆ. ಇಂತಹ ಪುಣ್ಯಮಯ ದೇವಸ್ಥಾನದ ಸಮುದಾಯ ಭವನಕ್ಕೆ ೧೦ ಲಕ್ಷ ರೂ. ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಶಾಹಾಜಹಾನ್ ಡೊಂಗರಗಾಂವ ಕಾರ್ಯಕ್ರಮ ಉದ್ಘಾಟಿಸಿದರು.

ತಾರಾಚಂದ ಮಹಾರಾಜರು, ಸರೂರಿನ ಮಲ್ಲಿಕಾರ್ಜುನ ಗುರುವಿನ, ಮೋಳೆಯ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮುಖಂಡ ಗಜಾನನ ಮಂಗಸೂಳಿ, ವಕೀಲ ಅಮೋಘಸಿದ್ಧ ಖೋಬ್ರಿ, ಅಥಣಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಹಾಲುಮತ ತಾಲೂಕಾಧ್ಯಕ್ಷ ರಾವಸಾಬ ಬೇವನೂರ, ತಪಸಿಯ ಬಸವರಾಜ ಸ್ವಾಮೀಜಿ, ಶ್ರೀಶೈಲ ಶೆಲಪ್ಪಗೋಳ, ಸಿದ್ದರಾಮ ಬಿಳ್ಳೂರ, ಗುರುರಾಜ ಕಾಮನ್, ಕಲ್ಲಪ್ಪ ಗುಡ್ಡೊಡಗಿ, ಮಲ್ಲಪ್ಪ ಕೊಕಟನೂರ ಇತರರಿದ್ದರು.