ಜಿಲ್ಲೆ

ಹೆತ್ತ ಕಂದಮ್ಮನ ಮುದ್ದಾಡಲಾಗುತ್ತಿಲ್ಲ!

ಗದಗ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಕರೊನಾ ಸೋಂಕಿತ ಮಹಿಳೆ ಜನ್ಮ ನೀಡಿದ ಮಗು ಅಕ್ಷರಶಃ ಅನಾಥ ಸ್ಥಿತಿ ಅನುಭವಿಸುತ್ತಿದೆ. ಅನಿವಾರ್ಯ ಕಾರಣದಿಂದ ತಾಯಿಯಿಂದ ದೂರವಾಗಿರುವ ಕಂದಮ್ಮನ ಸ್ಥಿತಿ ನೋಡಿದರೆ ಎಂಥವರ ಕರುಳು ಚುರ್ ಎನ್ನದೆ ಇರದು. ತಾಯಿಗೆ ಕರೊನಾ ಸೋಂಕು ಇರುವುದರಿಂದ ತಾಯಿ ಹಾಗೂ ಮಗುವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಬಂಧು-ಬಳಗ ಇದ್ದರೂ ಆಸ್ಪತ್ರೆಗೆ ಯಾರೂ ಬಾರದಿರುವ ಪರಿಸ್ಥಿತಿ ಇರುವುದರಿಂದ ಬಾಣಂತಿಯೂ ಅನಾಥ ಸ್ಥಿತಿ ಅನುಭವಿಸುವಂತಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿಗೆ ಗುರುವಾರ ಕರೊನಾ ಸೋಂಕು ದೃಢಪಟ್ಟಿತ್ತು. ಶುಕ್ರವಾರ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಹಿಳೆಗೆ ಕರೊನಾ ಸೋಂಕು ಇದ್ದುದರಿಂದ ಮಗುವನ್ನು ಬೇರೆಡೆ ಇರಿಸಲಾಗಿದೆ. ಹೆತ್ತ ಮಗುವನ್ನು ಮುದ್ದಾಡಲು ಆಗದೆ ತಾಯಿಯ ವೇದನೆ ಹೇಳತೀರದಾಗಿದೆ. ಮಗುವಿನ ಗಂಟಲ ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಜಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ತಾಯಿ ಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ಮಗುವಿಗೆ ಕುಡಿಸುತ್ತಿದ್ದಾರೆ. ಸದ್ಯ ಮಗು ಆರೋಗ್ಯದಿಂದ ಇದ್ದು, ಯಾವುದೇ ತೊಂದರೆಯೂ ಇಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರಿಗೌಡರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತ್ತೆ 7 ಜನರಿಗೆ ಸೋಂಕು

ಗದಗ: ಜಿಲ್ಲೆಯಲ್ಲಿ ಭಾನುವಾರ 7 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ ಹಾಗೂ ಸಂದಿಗವಾಡ ಗ್ರಾಮದ ನಿವಾಸಿ 39 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜೂ. 30 ರಂದು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ಗದಗ-ಬೆಟಗೇರಿ ನಗರದ ಕುರಟ್ಟಿಪೇಟ ನಿವಾಸಿ 33 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ನರಗುಂದದ ಗಾಡಿ ಓಣಿ ನಿವಾಸಿ, 45 ವರ್ಷದ ಮಹಿಳೆ, 57 ವರ್ಷದ ಮಹಿಳೆ ಮತ್ತು 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಬಳ್ಳಾರಿಯಿಂದ ಜಿಲ್ಲೆಗೆ ಆಗಮಿಸಿದ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದ ನಿವಾಸಿ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರಿಗೂ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.