ಸವದತ್ತಿ: ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಸ್ಫೂರ್ತಿ ಯೋಜನೆ ಪರಿಣಾಮಕಾರಿ ಆಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಭಾನುವಾರ ಸ್ಫೂರ್ತಿ ಯೋಜನೆ, ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆಗೆ ಸ್ಫೂರ್ತಿ ಕಾರ್ಯಕ್ರಮ ಸಹಕಾರಿಯಾಗಿದೆ. ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ನಂತರ ಸಮಸ್ಯೆ ಅನುಭವಿಸಿದ್ದನ್ನು ಗಮನಿಸಿದ್ದೇವೆ. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಬಾಲ್ಯವಿವಾಹ ತಡೆಗಟ್ಟಲು ಎಲ್ಲರ ಒಗ್ಗಟ್ಟು ಬಹಳ ಮುಖ್ಯ. ಹೀಗಾಗಿ ಪಾಲಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಸ್ಫೂರ್ತಿ ಯೋಜನೆ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ರೂಪಾ ಕೂಡಲಗಿಮಠ ಮಾತನಾಡಿ, ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ನೈರ್ಮಲ್ಯ, ಲೈಂಗಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವ ಉದ್ದೇಶವಿದೆ. ತಾಲೂಕಿನ ಅಪೌಷ್ಟಿಕ ಹಾಗೂ ಶಾಲೆ ಬಿಡುವ ಹೆಣ್ಣು ಮಕ್ಕಳನ್ನು ಗುರುತಿಸಿ ಪರಿಹಾರ ಬೋಧನಾ ತರಬೇತಿ ನೀಡಲಾಗುವುದು. ಪಾಲಕರ ಸಂವಾದದ ಮೂಲಕ ಬಾಂಧವ್ಯ ವದ್ಧಿಗೆ ಒತ್ತು ನೀಡಲಾಗುವುದು. ಬಾಲ್ಯ ವಿವಾಹ ಕುರಿತು ನಾಟಕ ಪ್ರದರ್ಶನ ಏರ್ಪಡಿಸಿ ಜಾಗೃತಿ ಮೂಡಿಸಲಾಗುವುದು ಎಂದರು.
ಸಂವಾದದಲ್ಲಿ ತಾಲೂಕಿನ ಕೆಲ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಗೃಹ, ನೀರಿನ ಸಮಸ್ಯೆ ಮತ್ತು ಸ್ಫೂರ್ತಿ ಯೋಜನೆಗೆ ಸಹಕರಿಸದ ಶಾಲೆಗಳ ಕುರಿತು ವಿದ್ಯಾರ್ಥಿನಿಯರು ಶಾಸಕರಿಗೆ ಮನವರಿಕೆ ಮಾಡಿದರು. ಶಾಸಕ ವೈದ್ಯ ಅಧಿಕಾರಿಗಳೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.