ಜಿಲ್ಲೆ

ಹೆಣ್ಮಕ್ಕಳ ಆತ್ಮರಕ್ಷಣೆಗೆ ಜೂಡೋ ಸಹಕಾರಿ

ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಹೆಣ್ಮಕ್ಕಳ ಆತ್ಮರಕ್ಷಣೆಗೆ ಜೂಡೋ ಕಲಿಕೆ ಸಹಕಾರಿ ಎಂದು ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಪಪೂ ವಿಭಾಗ, ನಮ್ಮ ಎಕ್ಸ್‌ಪರ್ಟ್ ಪಿಯು ಕಾಲೇಜಿನಿಂದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜೂಡೋ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಪಾನ್ ದೇಶದಲ್ಲಿ ಮೊದಲು ಆರಂಭವಾದ ಜೂಡೋದಿಂದ ವಿಶೇಷವಾಗಿ ಮಹಿಳೆಯರ ಸ್ವಯಂ ರಕ್ಷಣೆಗೆ ಅನುಕೂಲವಾಗಲಿದೆ. ಪ್ರತಿ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಲಿಸಿದಲ್ಲಿ ಅತ್ಯಂತ ಸಹಕಾರಿ ಎಂದು ಸಲಹೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 139 ಬಾಲಕ, 101 ಬಾಲಕಿಯರು ಸೇರಿ ಒಟ್ಟು 240 ಕ್ರೀಡಾಪಟುಗಳು ಭಾಗವಹಿಸಿದ್ದರು. ಬಾಲಕ-10, ಬಾಲಕಿಯರ ವಿಭಾಗದ 9 ವಿಧದಲ್ಲಿ ಸ್ಪರ್ಧೆ ನಡೆಯಲಿದೆ.

ಈ ಬಾರಿಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 19 ಕ್ರೀಡಾಪಟುಗಳು ಡಿಸೆಂಬರ್ ಕೊನೆ ವಾರದಲ್ಲಿ ಪಂಜಾಬ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಬಾಲಕಿಯರ ಮೊದಲ ನಾಲ್ಕು ಸುತ್ತಿನ ವಿವಿಧ ವಿಭಾಗಗಳಲ್ಲಿ ವಿಜೇತರಾದ ಬಾಗಲಕೋಟೆಯ ಸ್ವಾತಿ, ಚಿಕ್ಕೋಡಿಯ ಅನುರಾಧಾ, ಬೆಂಗಳೂರು ದಕ್ಷಿಣ ವಿಭಾಗದ ವರಲಕ್ಷ್ಮೀ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಬಾಲಕರ ವಿಭಾಗದಲ್ಲಿ ಬೆಳಗಾವಿಯ ಮನೋಜ್ ಸತ್ಯಪ್ಪ, ದಾವಣಗೆರೆಯ ವಿಕಾಸ್ ನಾಯ್ಕ, ಕಲಬುರಗಿಯ ಕೆ.ಆಶಿಶ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದರು.

ಪಿಯುಡಿಡಿ ಆರ್.ಪುಟ್ಟಸ್ವಾಮಿ, ತರಬೇತುದಾರೆ ಡಾ.ಎಂ.ಎನ್.ತ್ರಿವೇಣಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ, ಕಾರ್ಯದರ್ಶಿ ಆರ್.ಮುಸ್ತಾಫ, ಖಜಾಂಚಿ ಜೆ.ರಂಗಸ್ವಾಮಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್, ಪ್ರಾಚಾರ್ಯ ಪಿ.ಅರುಣ್‌ಕುಮಾರ್ ಇತರರಿದ್ದರು.