ಜಿಲ್ಲೆ

ಹೆಣ್ಣುಮಕ್ಕಳು ಸ್ವಾವಲಂಬನೆ ಸಾಧಿಸಲಿ- ಬಿ.ವಾಮದೇವಪ್ಪ

ಡಿ. ಎಂ. ಮಹೇಶ್

ದಾವಣಗೆರೆ: ಹೆಣ್ಣುಮಕ್ಕಳು ವಿದ್ಯಾಭ್ಯಾಸದ ನಂತರದಲ್ಲಿ ಸರ್ಕಾರಿ ಕೆಲಸ ಸಿಗಲಿಲ್ಲವೆಂದು ಕೈಕಟ್ಟಿ ಕೂರದೆ ಸ್ವ–ಉದ್ಯೋಗದೊಂದಿಗೆ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರಿರುವುದು ಸಂತಸದ ವಿಷಯ. ಎಲ್ಲರಿಗೂ ಬುದ್ಧಿಶಕ್ತಿ ಇರುತ್ತದೆ. ಕೆಲವರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಬಡವನಾಗಿ ಹುಟ್ಟಿದರೂ ಬಡವನಾಗಿಯೇ ಸಾಯುವುದು ತಪ್ಪು. ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪತ್ರಕರ್ತೆ ಎಚ್‌.ಅನಿತಾ ಮಾತನಾಡಿ ‘ವೈದ್ಯಕೀಯ, ಇಂಜಿನಿಯರಿಂಗ್‌ ಕೋರ್ಸ್‌ಗಳೇ ಶ್ರೇಷ್ಠವಲ್ಲ. ಬಿಎ, ಬಿಎಸ್ಸಿ, ಬಿಕಾಂ ಓದುವವರ ಸೇವೆಯೂ ಸಮಾಜಕ್ಕೆ ಅಗತ್ಯವಿದೆ. ಕೀಳರಿಮೆ ತೊರೆದು ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಉನ್ನತ ಕೊಡುಗೆ ನೀಡಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮೂಲಕ ಗಮನ ಸೆಳೆದಿದ್ದರೂ, ದೌರ್ಜನ್ಯಗಳಿಂದ ಸಂಪೂರ್ಣ ಮುಕ್ತವಾಗಿಲ್ಲ. ಹೆಣ್ಣುಮಕ್ಕಳ ಮೇಲಿನ ಕೆಲ ಅಪರಾಧ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸುವಂತಿವೆ. ಪಾಲಕರು ಹೆಣ್ಣುಮಕ್ಕಳಿಗೆ ಮಾತ್ರವೇ ನಿರ್ಬಂಧಗಳನ್ನು ಹೇರದೆ ಗಂಡುಮಕ್ಕಳಿಗೂ ಲಿಂಗ ಸೂಕ್ಷ್ಮತೆ ಕುರಿತು ಅರಿವು ಮೂಡಿಸುವ, ಹೆಣ್ಣುಮಕ್ಕಳನ್ನು ಗೌರವಿಸುವ ಮನೋಭಾವವನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ದಾವಣಗೆರೆ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ದಿಳ್ಯೆಪ್ಪ ಮಾತನಾಡಿದರು. ಕಾಲೇಜು ಪ್ರಾಚಾರ್ಯೆ ಪ್ರೊ.ಎ.ಎಸ್‌. ಶೈಲಜಾ, ಐಕ್ಯುಎಸಿ ಸಂಚಾಲಕ ಭೀಮಪ್ಪ ಪಿ., ಕಚೇರಿ ಅಧೀಕ್ಷಕ ಶೇಷಪ್ಪ ಇದ್ದರು.

ಬಿ. ಎ,. (ಕನ್ನಡ ಐಚ್ಛಿಕ) ವಿಭಾಗದಲ್ಲಿ 8ನೇ ರ‍್ಯಾಂಕ್‌ ಪಡೆದ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಎಸ್‌.ಎ. ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಪೂರ್ಣಿಮಾ ಸ್ವಾಗತಿಸಿದರು. ಸಿದ್ದಲಿಂಗಮ್ಮ ಕಾರ್ಯಕ್ರಮ ನಿರೂಪಿಸಿದರು.