ರಾಜು ಹೊಸಮನಿ ನರಗುಂದ
ಮಹಿಳೆಯರು, ಯುವತಿಯರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸರ್ಕಾರವು ಸ್ನೇಹಾ ಕ್ಲಿನಿಕ್ಗಳನ್ನು ಆರಂಭಿಸಿದೆ. ಆದರೆ, ಲಾಕ್ಡೌನ್ ತಂದೊಡ್ಡಿದ ಸಮಸ್ಯೆಯಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಜನರು ಈ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ಜಿಲ್ಲಾ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹದಿ ಹರೆಯದವರಿಗಾಗಿ ಸರ್ಕಾರ 2016ರಲ್ಲಿ ಸ್ನೇಹಾ (ಎಎಫ್ಎಚ್ಸಿ) ಕ್ಲಿನಿಕ್ಗಳನ್ನು ತೆರೆದಿದೆ. ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆ, ತಾಲೂಕಿನ ಚಿಕ್ಕನರಗುಂದ, ಜಗಾಪೂರ, ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ನೇಹಾ ಕ್ಲಿನಿಕ್ಗಳನ್ನು ಆರಂಭಿಸಬೇಕಾಗಿದೆ. ಪ್ರತಿ ಕೇಂದ್ರದಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಬೇಕಾಗಿದೆ. ಆದರೆ, ನರಗುಂದದ ಸಾರ್ವಜನಿಕ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಈ ಸೇವೆ ನೀಡಲಾಗುತ್ತಿದೆ.
ಮಹಿಳೆಯರ ಋತು ಕಾಲದಲ್ಲಿ ಉತ್ತಮ ಶುಚಿತ್ವ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶುಚಿ ಕಾರ್ಯಕ್ರಮ ಜಾರಿಗೆ ತಂದಿದೆ. ಸರ್ಕಾರಿ, ಅನುದಾನಿತ ಹಾಗೂ ವಸತಿ ಶಾಲೆಗಳಲ್ಲಿನ 6 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಮತ್ತು ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳಿಗೆ ಋತುಸ್ರಾವದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸಲಾಗುತ್ತದೆ. ಆದರೆ, ರಾಜ್ಯಾದ್ಯಂತ ಒಂದೂವರೆ ವರ್ಷದಿಂದ ಸರ್ಕಾರದಿಂದ ಶುಚಿ ನ್ಯಾಪ್ಕಿನ್ಗಳೇ ಬಂದಿಲ್ಲ. ಇದೀಗ ಲಾಕ್ಡೌನ್ ಬಳಿಕ ಶಾಲೆ, ಕಾಲೇಜು, ವಸತಿ ನಿಲಯಗಳು ಆರಂಭವಾಗಿಲ್ಲ. ಸಾರಿಗೆ ಸಂಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳಾದ ಪರಿಣಾಮ ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿಗದಿತ ಅವಧಿಯಲ್ಲಿ ಮಹಿಳೆಯರಿಗೆ ಶುಚಿ ಪ್ಯಾಡ್ಗಳು ದೊರೆಯದ ಕಾರಣ ವಿವಿಧ ಅನಾರೋಗ್ಯ, ಸೋಂಕು ಮತ್ತು ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ.
ತಾಲೂಕಿನಲ್ಲಿ ಬಾಲಕಿಯರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಎಲ್ಲ ಸರ್ಕಾರಿ ಅನುದಾನಿತ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ. | ಅಕೀಬ್ ಜಾವೀದ ಹುಲ್ಲೂರ ಆಪ್ತ ಸಮಾಲೋಚಕ, ನರಗುಂದ