ಜಿಲ್ಲೆ

ಹೆಣ್ಣುಮಕ್ಕಳಿಗಿರಲಿ ವಸ್ತ್ರಸಂಹಿತೆ ಪಾಠ  -ಕಿರಣ್ ಆರ್. ದೇಸಾಯಿ ಆಶಯ -ಅತ್ಯಮ್ಮನ ಸದನ ಕೃತಿ ಬಿಡುಗಡೆ

ದಾವಣಗೆರೆ: ಹೆಣ್ಣುಮಕ್ಕಳಿಗೆ ಮನೆಗಳಿಂದಲೇ ವಸ್ತ್ರಸಂಹಿತೆ ಪಾಠ ಕಲಿಸಬೇಕಿದೆ ಎಂದು ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಕಿರಣ್ ಆರ್. ದೇಸಾಯಿ ಆಶಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ನಾಲ್ಕನೇ ವಾರ್ಷಿಕೋತ್ಸವದಲ್ಲಿ ‘ಅತ್ಯಮ್ಮನ ಸದನ’ ಲೇಖನಗಳ ಸಂಗ್ರಹ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಅನೇಕ ಹೆಣ್ಣುಮಕ್ಕಳು ಟಿವಿಗಳಿಂದ ಪ್ರಭಾವಿತರಾಗಿ ಸಹ್ಯವಲ್ಲದ ಉಡುಪುಗಳನ್ನು ಧರಿಸುತ್ತಿದ್ದಾರೆ. ಮನೆಗಳಲ್ಲಿ ತಾಯಂದಿರು, ಪಾಲಕರು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅಲ್ಲಿಂದಲೇ ಅವರಿಗೆ ಕಲಿಕಾ ಪ್ರಕ್ರಿಯೆ ಶುರುವಾಗಬೇಕಿದೆ ಎಂದರು.

ಇಂದಿನ ಮಕ್ಕಳಲ್ಲಿ ಶಿಕ್ಷಣದ ಜತೆಯಲ್ಲೇ ಮಾನವೀಯ ಗುಣವನ್ನು ಬೆಳೆಸಬೇಕು. ವೈಯಕ್ತಿಕ ಬೇಡಿಕೆಗಳನ್ನು ಪೂರೈಸುವಂತೆ ಪೀಡಿಸಿ ಕೈ-ಕಾಲು ತೆಗೆಯುವ ಮಕ್ಕಳು ಇಂದು ಬೇಕಿಲ್ಲ. ಬದಲಾಗಿ ಪಾಲಕರನ್ನು ಪ್ರೀತಿಸುವ, ಅವರ ಜೀವನದ ಭಾರವನ್ನು ಹೊರುವವರು ಬೇಕಾಗಿದ್ದಾರೆ ಎಂದು ಹೇಳಿದರು.

ಅತ್ತೆ ಇರಲಿ, ಸೊಸೆಯರೇ ಇರಲಿ ಎಲ್ಲದನ್ನೂ ಸ್ವೀಕರಿಸುವ ಹಾಗೂ ಸಂತೃಪ್ತ ಮನೋಭಾವ ಇರಬೇಕು. ಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೆ ಕೇವಲ ಎರಡು ಕುಟುಂಬಗಳು ಮಾತ್ರವಲ್ಲ. ಎರಡು ಊರುಗಳ ನಡುವೆ ಭಾವನಾತ್ಮಕ ಬಾಂಧವ್ಯ ಬೆಸೆಯಲಿದೆ ಎಂದರು.

ಕನ್ನಡದಲ್ಲಿ ಸಂಬಂಧಗಳಿಗೆ ಅನೇಕ ಪದಗಳಿವೆ. ಇಲ್ಲಿ 154 ಸಮಾನಾರ್ಥಕ ಪದಗಳನ್ನು ಕಾಣಬಹುದು. ಆದರೆ ಇಂಗ್ಲಿಷಿನಲ್ಲಿ ಮದರ್ ಇನ್ ಲಾ, ಫಾದರ್ ಇನ್ ಲಾ, ಡಾಟರ್ ಇನ್ ಲಾ ಎಂದು ಕರೆಯಲಾಗುತ್ತಿದೆ. ಕಾನೂನಿನಿಂದ ಯಾರೂ ಅತ್ತೆ-ಸೊಸೆ, ಮಾವ ಆಗುವುದಿಲ್ಲ ಎಂದೂ ಹೇಳಿದರು.

‘ಅತ್ಯಮ್ಮನ ಸದನ’ ಕೃತಿಯಲ್ಲಿ ಸಾಂಸ್ಕೃತಿಕತೆಯ ಅನಾವರಣ, ಧಾರ್ಮಿಕ ಆಚರಣೆ, ಸಾಮಾಜಿಕ ಸಾಧನೆಗಳು, ಕೌಟುಂಬಿಕ ವ್ಯವಸ್ಥೆ ಕುರಿತಾದ ಬರಹಗಳಿವೆ. ಅತ್ತೆಯ ಮನೆಯಲ್ಲಿನ ಸೂಕ್ಷ್ಮತೆಗಳನ್ನು ಅನೇಕ ಲೇಖಕಿಯರು ಇಲ್ಲಿ ತೆರೆದಿಟ್ಟಿದ್ದಾರೆ. ಹೊಸದಾಗಿ ಅತ್ತೆ ಮನೆಗೆ ಹೋಗುವ ಸೊಸೆಯಂದಿರಿಗೆ ಈ ಪುಸ್ತಕ ನೀಡಬೇಕು ಎಂದು ತಿಳಿಸಿದರು. ದಾವಣಗೆರೆ ಜಿಲ್ಲೆಯ ಲೇಖಕಿಯರು ಇಲ್ಲಿನ ಜಾನಪದ ಹಬ್ಬಗಳ ಕುರಿತಾದ ಪುಸ್ತಕ ಹೊರತರಲಿ ಎಂದೂ ಆಶಿಸಿದರು.

‘ಕವನದಲ್ಲರಳಿದ ತಿನಿಸುಗಳು’ ಕೃತಿ ಕುರಿತು ಮಾತನಾಡಿದ ಶಿವಮೊಗ್ಗದ ಸಾಹಿತಿ ವಿಜಯಾ ಶ್ರೀಧರ್, ಹೂವು, ಒಂದು ತಿಂಡಿಗೆ ಸೀಮಿತವಾದ ಕೆಲವೇ ಕೃತಿಗಳಿವೆ. ಆದರೆ ಹಲವು ತಿಂಡಿ ತಿನಿಸುಗಳ ಕುರಿತಂತೆ ಕವನ ರೂಪದಲ್ಲಿ ಹೊರತಂದಿರುವ ಈ ಪ್ರಯೋಗ ಹೊಸದಾದುದು. ಇದು ಹೊಸ ಸೊಸೆಯಂದಿರ ಕೈಯಲ್ಲಿ ಇದ್ದರೆ ಹೊಸ ತಿನಿಸು ಮಾಡುವುದನ್ನು ಕಲಿಯಬಹುದು ಎಂದು ಹೇಳಿದರು.

ಕಾದಂಬರಿಕಾರ್ತಿ ಎಂ.ಕೆ. ಇಂದಿರಾ ಅವರ ಫಣಿಯಮ್ಮ ಕೃತಿಯಲ್ಲಿ ಮಲೆನಾಡಿನ ಅಡುಗೆಗಳ ಪರಿಚಯವಿದೆ. ಶಾಲಾ ಮಕ್ಕಳಿಗೆ ಈ ಕೃತಿಯಲ್ಲಿನ ತಿಂಡಿಗಳ ಹೆಸರು ನಮೂದಿಸುವ ಸ್ಪರ್ಧೆ ಆಯೋಜಿಸುವಂತಾದರೆ ಅವುಗಳ ಪರಿಚಯವೂ ಆಗಲಿದೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ ಅತ್ತೆ-ಸೊಸೆ, ಪತಿ-ಪತ್ನಿ, ಪಾಲಕರು-ಮಕ್ಕಳ ನಡುವಿನ ಸಂಬಂಧ ಗಟ್ಟಿಯಾಗಿರಬೇಕು. ಅತ್ತೆ-ಸೊಸೆಯರಲ್ಲಿ ನಾವು ಎಂಬ ಒಗ್ಗಟ್ಟು ಮೂಡಬೇಕು ಎಂದರು.

ಕಾರ್ಯಕ್ರಮದಲ್ಲಿ ನೀಲಗುಂದ ಜಯಮ್ಮ, ವೈದ್ಯೆ ಡಾ. ಶಶಿಕಲಾ ಕೃಷ್ಣಮೂರ್ತಿ ಹಾಗೂ ಮಂಗಳಗೌರಿ ಅವರಿಗೆ ಕ್ರಮವಾಗಿ ಸೇವಾಬಂಧು, ಸಾಹಿತ್ಯ ಶಾರದೆ, ಸಂಗೀತ ಶಾರದೆ ಬಿರುದುಸಹಿತ ಸನ್ಮಾನಿಸಲಾಯಿತು.

‘ಕವನದಲ್ಲರಳಿದ ತಿನಿಸುಗಳು’ ಕೃತಿಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಬಿಡುಗಡೆಗೊಳಿಸಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಇದ್ದರು.