ಕೊಳ್ಳೇಗಾಲ : ಹೆಣ್ಣುಮಕ್ಕಳ ಪ್ರಗತಿಗೆ ವಿಶೇಷ ಗಮನ ವಹಿಸಬೆಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ ಹೇಳಿದರು.
ಪಟ್ಟಣದ ಸಂತ ಫ್ರಾನ್ಸಿಸ್ ವಿದ್ಯಾ ಸಂಸ್ಥೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ‘ಹೆಣ್ಣು ಮಗು ಉಳಿಸಿ ದಿನ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣುಮಗು ಎಂದರೆ ಅದು ಪ್ರತಿ ಮನೆಯ ದೊಡ್ಡ ಆಸ್ತಿ. ಹೆಣ್ಣು ಮಗುವಿನಿಂದ ಕುಟುಂಬ ಬೇಗ ಬೆಳೆಯುತ್ತದೆ. ಪ್ರತಿ ಕುಟುಂಬದಲ್ಲೂ ಹೆಣ್ಣು ಮಕ್ಕಳ ಪಾತ್ರ ಹಿರಿದು. ಹೆಣ್ಣು ಕುಟುಂಬದ ಶಕ್ತಿಯೂ ಹೌದು. ಶಕ್ತಿ ಕೇಂದ್ರವೂ ಹೌದು ಎಂದು ಅವರು ಹೇಳಿದರು. ಹೆಣ್ಣು ಮಕ್ಕಳ ಅಭ್ಯುದಯ ಬಯಸುವುದಕ್ಕಾಗಿ ಮೀಸಲಾದ ದಿನದಂದು ನಾವೆಲ್ಲರೂ ಅರಿವುಗಳನ್ನು ಸಮಾಜಕ್ಕೆ ವಿಸ್ತರಿಸೋಣ ಎಂದು ನ್ಯಾಯಾಧೀಶ ಟಿ.ಸಿ. ಶ್ರೀಕಾಂತ ತಿಳಿಸಿದರು.
ಭಾರತೀಯ ಹೆಣ್ಣು ಮಕ್ಕಳು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 24 ನೇ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಸಪೂರ್ಣ ಜಾಗೃತಿ ಚಟುವಟಿಕೆಗಳು ನಡೆಯಲಿವೆ. ದೀರ್ಘ ಕಾಲದಿಂದ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಬಹು ಮುಖ್ಯ ಎಂದರು. ಹೆಣ್ಣು ಮಕ್ಕಳಿಗೆ ಸಮಾನತೆಯ ಮತ್ತು ಅನ್ಯಾಯಗಳ ಕುರಿತು ಅರಿವು ಮೂಡಿಸುವ ಕೆಲಸ ಎಲ್ಲ ಸ್ತರದಲ್ಲೂ ಆಗಬೇಕಿದೆ. ದೇಶದ ಕಾನೂನು ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಂಘ- ಸಂಸ್ಥೆಗಳು ಮುಂದಾಗಬೇಕು ಎಂದು ನ್ಯಾಯಾಧೀಶ ಟಿ.ಸಿ ಶ್ರೀಕಾಂತ ಹೇಳಿದರು.