ಚಾಮರಾಜನಗರ: ಶಿಕ್ಷಣ ಸಂಸ್ಥೆಗಳಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳ ಸಮಗ್ರ ಆರೋಗ್ಯ, ಜಾಗೃತಿ, ಮಾರ್ಗದರ್ಶನ, ಸ್ವಚ್ಚ ಮೂಲ ಸೌಕರ್ಯ ಒದಗಿಸುವ ಉದ್ದೇಶದೊಂದಿಗೆ ಚಾಮರಾಜನಗರ ಜಿಲ್ಲಾಡಳಿತವು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ), ಬ್ಲಾಕ್‌ಚೇನ್ ಫಾರ್ ಇಂಪ್ಯಾಕ್ಟ್ ಹಾಗೂ ಫಿಯಾ ಫೌಂಡೇಶನ್ ಅವರ ನೆರವಿನೊಂದಿಗೆ ಇಂಡಿಯಾ ಹೆಲ್ತ್ ಅಂಡ್ ಕ್ಲೈಮೇಟ್ ರೆಸಿಲಿಯನ್ಸ್ ಫೆಲೋಶಿಪ್ (ಐಹೆಚ್‌ಸಿಆರ್‌ಎಫ್) ಪ್ರಾಜೆಕ್ಟ್ ಅಡಿ ರೂಪಿಸಿರುವ ಪ್ರಾಣಸಖಿ ಯೋಜನೆ ಕುರಿತ ವಿಶೇಷ ಕಾರ್ಯಗಾರ ಶನಿವಾರ ನಡೆಯಿತು.
ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರಾಂಶುಪಾಲರಿಗೆ ಪ್ರಾಣಸಖಿ ಯೋಜನೆ ಕುರಿತ ಕಾರ್ಯಗಾರ ಆಯೋಜಿತವಾಗಿತ್ತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿ ಹಾಗೂ ಆಸಕ್ತಿಯಿಂದ 800ಕ್ಕೂ ಹೆಚ್ಚು ಜಿಲ್ಲಾಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ 10 ರಿಂದ 18 ವರ್ಷ ವಯಸ್ಸಿನ ಕಿಶೋರಿ ವಿದ್ಯಾರ್ಥಿನಿಯರಿಗೆ ಆರೋಗ್ಯ, ಸ್ವಚ್ಚತೆ ಕುರಿತು ಸಮಯೋಚಿತ ಮಾಹಿತಿ ನೀಡಿ ಅವರನ್ನು ಯಶಸ್ಸಿನ ದಾರಿಗೆ ಕೊಂಡೋಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾಣಸಖಿ ಕಾರ್ಯಕ್ರಮ ರೂಪಿತವಾಗಿದೆ.
ಹದಿಹರೆಯದವರಲ್ಲಿ ಇರಬಹುದಾದ ತಪ್ಪು ಕಲ್ಪನೆಗಳನ್ನು ನಿವಾರಿಸಿ ರಕ್ತಹೀನತೆ, ಅಪೌಷ್ಠಿಕತೆ, ಮುಟ್ಟಿನ ಸಂದರ್ಭದಲ್ಲಿ ವಹಿಸಬೇಕಾದ ಸ್ವಚ್ಚತೆ, ಮಾನಸಿಕ ಆರೋಗ್ಯ, ಸ್ವಚ್ಚ ಮೂಲ ಸೌಕರ್ಯಗಳ ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಿ ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರೋಗ್ಯವನ್ನು ಸಧೃಢಗೊಳಿಸುವ ಮಹತ್ತರ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಪ್ರಾಣಸಖಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ, ವಿವಿಧ ಸಂಸ್ಥೆಗಳು ಕೈಗೊಂಡಿರುವ ಪ್ರಾಣಸಖಿ ವಿಶೇಷ ಆರೋಗ್ಯ ಯೋಜನೆಯ ಕಾರ್ಯಗಾರದಲ್ಲಿ ವರ್ಚುವಲ್ ಮೂಲಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪಾಲ್ಗೊಂಡು ಅಗತ್ಯ ಮಾರ್ಗದರ್ಶನ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಅವರು ಮಾತನಾಡಿ, ಕಿಶೋರಿಯರಿಗೆ ಸ್ನೇಹಪೂರ್ಣ ವಾತಾವರಣ ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಈ ಯೋಜನೆಗೆ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಮುದಾಯಗಳು ಒಟ್ಟಾಗಿ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟ ಗೌರಮ್ಮ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ವಿಜಿಕೆಕೆಯ ಡಾ. ತಾನಿಯಾ ಶೇಷಾದ್ರಿ, ಐಹೆಚ್‌ಸಿಆರ್‌ಎಫ್ ಯೋಜನೆಯ ಮಲ್ಲಿಕಾರ್ಜುನ್, ಧನಲಕ್ಷ್ಮಿ, ಇನ್ನಿತರರು ಉಪಸ್ಥಿತರಿದ್ದರು.