ಜಿಲ್ಲೆ

ಹೆಣ್ಣು ಮಕ್ಕಳು ವಿದ್ಯೆ ಕಲಿತು ಸಮಾಜದ ಆಸ್ತಿಯಾಗಬೇಕು:ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಕರೆ

ಹಾಸನ: ಹೆಣ್ಣು ಸಮಾಜದ ಕಣ್ಣು ಎಂಬ ಮಾತಿದೆ. ಅದೇ ರೀತಿ ಹೆಣ್ಣು ಮಕ್ಕಳು ವಿದ್ಯೆ ಕಲಿತರೆ ಸಮಾಜದ ಆಸ್ತಿಯಾಗುತ್ತಾಳೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಕಿವಿಮಾತು ಹೇಳಿದರು.
ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ವಿಜಯವಾಣಿ ವತಿಯಿಂದ ಎವಿಕೆ ಕಾಲೇಜು ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಕೆಲಸ ಮಾಡುತ್ತಿದ್ದಾಳೆ. ಎಲ್ಲಾ ವಿಭಾಗದಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸಾಧಕರಾಗಿ ನೀವು ಕೂಡ ಜೀವನದಲ್ಲಿ ಮುಂದೆ ಬನ್ನಿ ಎಂದು ಕರೆ ನೀಡಿದರು.
ನೀವು ಮೊದಲು ನಿಮ್ಮ ತಂದೆ-ತಾಯಿಗೆ ಚಿರ ಋಣಿಯಾಗಿರಬೇಕು. ಏಕೆಂದರೆ ನಿಮ್ಮ ಮೇಲೆ ನಂಬಿಕೆ ಇಟ್ಟು ಶಿಕ್ಷಣ ಕೊಡಿಸುತ್ತಾರೆ. ಅವರ ನಂಬಿಕೆಯನ್ನು ನೀವು ಉಳಿಸಿಕೊಳ್ಳಬೇಕು. ಯಾವುದೇ ಆಕರ್ಷಣೆಗೆ ಒಳಗಾಗದೆ ವಿದ್ಯಾರ್ಥಿನಿಯರ ದೃಷ್ಟಿಕೋನ ಕೇವಲ ಓದಿನ ಕಡೆಗೆ ಇರಬೇಕು ಮತ್ತು ತಾವು ಏನಾದರೂ ಸಾಧಿಸಬೇಕು ಎಂಬ ಛಲವನ್ನು ಹೊಂದಿರಬೇಕು. ಇಂತಹದ್ದೇ ಕ್ಷೇತ್ರ ಅಂತೇನಿಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲೂ ಹಲವಾರು ಉದ್ಯೋಗಾವಕಾಶಗಳು ತೆರೆದುಕೊಂಡಿವೆ. ಸ್ವಂತ ಉದ್ಯಮಿ ಮಾಡಲು ವಿಫುಲ ಅವಕಾಶಗಳಿವೆ. ತಮಗೆ ಇಷ್ಟ ಇರುವ, ಸಾಮರ್ಥ್ಯ ಇರುವ ಕ್ಷೇತ್ರದಲ್ಲಿ ನೀವು ನಿಮ್ಮ ಗುರಿ ಇರಿಸಿಕೊಂಡು ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕಂಡ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಶ್ರಮ ಮತ್ತು ಶ್ರದ್ಧೆ ಅತೀ ಮುಖ್ಯವಾಗಿರುತ್ತದೆ. ಈ ರೀತಿ ನೀವು ಮಾಡಿದರೆ ದೇಶದ ಹೆಮ್ಮೆಯ ಹೆಣ್ಣು ಮಗಳಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಹೆಣ್ಣನ್ನು ಸಮಾಜದಲ್ಲಿ ಕೀಳರಿಮೆಯಿಂದ ನೋಡುವಂತಹ ದೃಷ್ಟಿಕೋನ ಬದಲಾಗಬೇಕು. ಹೆಣ್ಣಿನ ಮೇಲೆ ಶೋಷಣೆ ದೌರ್ಜನ್ಯ ಹಾಗೂ ಭ್ರೂಣ ಹತ್ಯೆಗಳು ನಡೆಯುತ್ತಿದ್ದು ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಲ್ಲದೆ ಕಾನೂನು ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಠಿಣವಾಗಿದ್ದು ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಬಿ.ಕೆ. ರವಿಕಾಂತ್ ಅವರು ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಆದರೆ ಇದು ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವಂತಹ ದೌರ್ಜನ್ಯ ಕಿರುಕುಳವನ್ನು ತಡೆಯಲು ಸಾಕಷ್ಟು ಕಾನೂನುಗಳಿವೆ. ಆದರೆ ಇದನ್ನೇ ನೆಪ ಮಾಡಿಕೊಂಡು ತಪ್ಪು ಮಾಡದೆ ಇರುವವರ ಮೇಲೂ ಪ್ರಕರಣ ದಾಖಲಿಸಿರುವ ಹಲವಾರು ನಿದರ್ಶನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಮನಸ್ಥಿತಿಯನ್ನ ಎಲ್ಲರೂ ಕೈ ಬಿಡಬೇಕು. ಅಲ್ಲದೇ ಹೆಣ್ಣು ಮಕ್ಕಳಿಗೆ ಆಗಿರುವಂತಹ ಅನ್ಯಾಯವನ್ನು ತಡೆಗಟ್ಟಲು ವಿಶೇಷ ಕಾನೂನುಗಳಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಹಿರಿಯ ವಕೀಲೆ ಗಿರಿಜಾಂಬಿಕೆ ಮಾತನಾಡಿ, ಪ್ರಕೃತಿಯು ತನ್ನ ಕೆಲಸವನ್ನು ಯಾವುದೇ ಸದ್ದುಗಳಿಲ್ಲದೆ, ಅಹಂ ಇಲ್ಲದೆ ನಿರ್ವಹಿಸಿಕೊಂಡು ಹೋಗುತ್ತಿದೆ. ಮನುಷ್ಯ ಶಬ್ದ ಮಾಡಿಕೊಂಡೆ ಬದುಕುತ್ತಿದ್ದಾನೆ. ಇದಕ್ಕೆ ಡಿವಿಜಿ ಅವರು ತಮ್ಮ ಕಗ್ಗದಲ್ಲಿ ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ ಎಂದು ಹೇಳಿರುವುದು. ಸದ್ದಿಲ್ಲದೆ ಹಾಗೆ ನಾವು ಸಾಧನೆ ಮಾಡಿ ತೋರಿಸಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್ ಅಧ್ಯಕ್ಷರಾದ ಮಮತಾ ಪಾಟೀಲ್ ಅವರು ಮಾತನಾಡಿ, ಈ ಪ್ರಪಂಚದಲ್ಲಿ ಒಂದು ಜೀವಿಯನ್ನು ಸೃಷ್ಟಿಸುವ ಶಕ್ತಿ ಇರುವುದು ಹೆಣ್ಣು ಮತ್ತು ಮಣ್ಣಿಗೆ ಮಾತ್ರ. ಇಂತಹ ಶಕ್ತಿಯನ್ನು ಎಲ್ಲರೂ ಪೂಜ್ಯ ಭಾವನೆಯಿಂದ ಕಾಣಬೇಕು ಹಾಗೂ ಗೌರವಿಸಬೇಕು ಎಂದು ಹೇಳಿದರು
ಹಿಮ್ಸ್ ಕಾಲೇಜಿನ ಮನಶಾಸ್ತ್ರ ವಿಭಾಗದ ಡಾ. ಸುನೀತಾ ಮಾತನಾಡಿ, ಮಹಿಳೆಗೆ ಎದುರಾಗುವ ಎಲ್ಲ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಆಕೆಗಿದೆ. ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಮತ್ತು ತಮ್ಮ ಮುಂದಿನ ಜೀವನದ ಬಗ್ಗೆ ದಿಟ್ಟ ಹೆಜ್ಜೆ ಇಡಬೇಕು ಎಂದು ಹೇಳಿದರಲ್ಲದೆ ಹದಿಹರೆಯದ ಸಮಸ್ಯೆಗಳು, ಅದಕ್ಕೆ ಪರಿಹಾರ, ಮಾನಸಿಕ ಸಮತೋಲನ ಕಾಯ್ದುಕೊಳ್ಳುವಿಕೆ ವಿಚಾರವಾಗಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಟಿ. ಪ್ರತಿಮಾ ದೇವಿ ಮಾತನಾಡಿ, ಪ್ರಸ್ತುತ ದಿನಗಳಲ್ಲೂ ಮಹಿಳೆ ತನಗಾಗುತ್ತಿರುವಂತಹ ದೌರ್ಜನ್ಯ, ಅತ್ಯಾಚಾರ ಹಾಗೂ ಕಿರುಕುಳವನ್ನು ಸಹಿಸಿಕೊಂಡಿರಬಾರದು. ಹೆಣ್ಣು ಮೌನವಾಗಿದ್ದರೆ ಅದೇ ಆಕೆಯ ಶತ್ರುವಾಗಿ ಬಿಡುತ್ತದೆ. ಯಾರಿಗೂ ಅಂಜದೆ ಧ್ವನಿ ಎತ್ತಿ ಮಾತನಾಡಬೇಕು ಮತ್ತು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳು ಕ್ರಿಯಾಶೀಲರು. ಯೋಚಿಸುವ ಶಕ್ತಿ ಇರಬೇಕು. ಅಲ್ಲದೆ ಪ್ರಪಂಚದಲ್ಲಿಯೂ ಕೂಡ ಹೆಣ್ಣಿನ ಬಗ್ಗೆ ಇರುವಂತಹ ತಾತ್ಸಾರ ಮನೋಭಾವ ಬದಲಾಗಬೇಕು. ಇದನ್ನು ಬದಲಾಯಿಸಲು ಕೂಡ ಹೆಣ್ಣು ಮಕ್ಕಳು ಮುಂದಾಗಬೇಕು ಎಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾರ್ಥಿನಿಯರಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜೇತರಿಗೆ ಪುಸ್ತಕ ವಿತರಣೆ ಮಾಡಲಾಯಿತು.