ಜಿಲ್ಲೆ

ಹೆಣ್ಣು ಮಕ್ಕಳು ದೌರ್ಜನ್ಯ ನಡೆದಾಗ ಭಯಿಲ್ಲದೇ ಧ್ವನಿ ಎತ್ತಬೇಕು:ಬಿ.ಕೆ.ರವಿಕಾಂತ

ಹಾಸನ: ಹೆಣ್ಣು ಮಕ್ಕಳು ದೌರ್ಜನ್ಯಗಳು ನಡೆದಾಗ ಭಯಗೊಳ್ಳದೆ ಅದರ ವಿರುದ್ದ ತಕ್ಷಣವೇ ಧ್ವನಿ ಎತ್ತಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ರಾಷ್ಟ್ರ್ರೀಯ ಸೇವಾ ಯೋಜನ ಘಟಕ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಎನ್‌ಎಸ್‌ಎಸ್ ನ ಸ್ವಯಂ ಸೇವಕರು ಮತ್ತು ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಹಕ್ಕು ಕಾಯ್ದೆ, ಮಹಿಳಾ ಮತ್ತು ಮಕ್ಕಳಿಗೆ ಕಾನೂನು ಅರಿವು ಹಾಗೂ ಮಹಿಳೆಯರ ಆಸ್ತಿ ಹಕ್ಕು ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಗಳು ನಡೆದಾಗ ಕೂಡಲೆ ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ತಡೆಗಟ್ಟುವಂತಹ ಕೆಲಸವನ್ನು ಮಾಡಬೇಕು, ಇಲ್ಲವಾದರೆ ದೌರ್ಜನ್ಯಗಳು ಹೆಚ್ಚಾಗಲಿದೆ ಎಂದು ಹೇಳಿದರು.
ಮಹಿಳೆ ಮತ್ತು ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪಂಗಡ, ಕಾರ್ಮಿಕರು, ಮಾನಸಿಕ ನ್ಯೂನತೆ ಹೊಂದಿರುವವರು, ಜೀತ ಪದ್ಧತಿಯಲ್ಲಿ ಸಿಲುಕಿದರಿಗೆ ಉಚಿತ ಕಾನೂನಿನ ನೆರವು ದೊರೆಯಲಿದ್ದು, ಅದರ ಸದುಪಯೋಗ ವನ್ನು ಸಡೆದುಕೊಳ್ಳಬೇಕು. ಅದರ ಅರಿವನ್ನು ಇತರರಿಗೂ ತಿಳಿಸಬೇಕು.ಶಿಕ್ಷಣ ಕಾಯ್ದೆ, ಸಮಾನ ಆಸ್ತಿ ಹಕ್ಕು ಕಾಯ್ದೆ ಬಗ್ಗೆ ಹೆಣ್ಣು ಮಕ್ಕಳು ಅರಿವನ್ನು ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ಜಗದಾಂಬೆ, ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ, ಎನ್‌ಎಸ್‌ಎಸ್ ಸಂಚಾಲಕ ಯೋಗೇಶ್, ಸದಸ್ಯರಾದ ಎಚ್.ಎನ್.ಹರೀಶ್, ಎಸ್.ಮಂಜುನಾಥ್, ಉಪನ್ಯಾಸಕರಾದ ವೆಂಕಟೇಶ್ ಮತ್ತು ಜೆ.ಡೇವಿಡ್ ಕುಮಾರ್ ಇತರರು ಇದ್ದರು.