ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಅತ್ಯುನ್ನತ ಸ್ಥಾನಗಳನ್ನು ಗಳಿಸಲು ಮಹಿಳೆಯರಿಗೂ ಅವಕಾಶ ದೊರೆತಿದ್ದು, ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯುವಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಕುದೇರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಥಿಯೋಡರ್ ಲೂಥರ್ ಸಲಹೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಭಾಷಣ ಮಾತನಾಡಿದರು.
ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳು ಅಂದರೆ ಅಸಡ್ಡೆಯಾಗಿ ಕಾಣುತ್ತಾರೆ. ಆದರೇ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತಮ್ಮ ನಡೆ-ನುಡಿ, ಶಿಕ್ಷಣ ಮತ್ತು ಸಾಧನೆಯಲ್ಲಿ ಹಿಂದೆ ಬೀಳಬಾರದು. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ನಂಬಿಕೆಯನ್ನು ಇಡಬೇಕು ಎಂದು ಹೇಳಿದರು.
ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಇರುವ ಪಠ್ಯವನ್ನು ಓದಿ ಉದ್ಯೋಗ ಪಡೆಯದೇ ಇರಬಹುದು. ಆದರೇ ಪಠ್ಯೇತರ ಚಟುವಟಿಕೆಗಳಿಂದ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಚ್ಚಲು ಸಾಂಸ್ಕೃತಿಕ, ಕ್ರೀಡೆ ಮತ್ತು ಇನ್ನಿತರೆ ಸಮಿತಿಗಳು ಸಹಕಾರಿಯಾಗಲಿದೆ. ಸತತ ಪ್ರಯತ್ನ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಹೇಳಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಸುಮತಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಸದೃಢತೆಯನ್ನು ಹೊಂದಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರತಿಭೆಯನ್ನು ಹೊರಹಚ್ಚಲು ಇಂತಹ ಕಾರ್ಯಕ್ರಮಗಳು ಅನುಕೂಲವಾಗಿದೆ. ವಿದ್ಯಾರ್ಥಿನಿಯರು ಕೂಡ ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ಇದು ಅತ್ಯಂತ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆಯಿತು. ಈ ಸಂದರ್ಭದಲ್ಲಿ ಕೊಳ್ಳೇಗಾಲ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಯಶಂಕರ್, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ.ಜಿ.ಮಲ್ಲೇಶ್, ಐಕ್ಯೂಎಸಿ ಸಮಿತಿ ಸಂಚಾಲಕಿ ಎಸ್.ಆರ್.ದೀಪಾ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಎಚ್.ಸಿ.ರುಕ್ಮಿಣಿ, ಕ್ರೀಡಾ ಸಮಿತಿ ಸಂಚಾಲಕ ಡಾ.ಶಾಂತರಾಜು, ಎನ್‌ಎಸ್‌ಎಸ್ ಸಂಚಾಲಕಿ ಡಾ.ಪ್ರಭಾವತಿ, ಪತ್ರಾಂಕಿತ ವ್ಯವಸ್ಥಾಪಕಿ ಸಾಕಮ್ಮ, ಡಾ.ಜಯಣ್ಣ ಹಾಗೂ ಇತರರು ಹಾಜರಿದ್ದರು.