ಜಿಲ್ಲೆ

ಹೆಣ್ಣು ಮಕ್ಕಳು ಉನ್ನತ ಶಿಕ್ಷಣದತ್ತ ಗಮನ ಹರಿಸಲಿ: ಡಾ. ಶಿವಕುಮಾರ ಸಲಹೆ

ಹಾಸನ: ಹೆಣ್ಣು ಮಕ್ಕಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಹಂತದಲ್ಲಿ ಓದಲು ತೋರುವ ಬದ್ಧತೆಯನ್ನು ಉನ್ನತ ಶಿಕ್ಷಣದ ಹಂತದಲ್ಲಿ ತೋರುವುದಿಲ್ಲ. ಹಾಗಾಗಿ ಅವರು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ. ಶಿವಕುಮಾರ ಅಭಿಪ್ರಾಯಪಟ್ಟರು.

ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 2024-25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಯುವತಿಯರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಹಂತದಲ್ಲಿ ಇರುವ ಓದುವ ಬದ್ಧತೆ ಆನಂತರ ಇರುವುದಿಲ್ಲ. ಹಾಗಾಗಿ ದೇಶದ ಅತೀ ದೊಡ್ಡ ಹುದ್ದೆಗಳಲ್ಲಿ ಹೆಣ್ಣು ಮಕ್ಕಳು ಇಲ್ಲದಂತಾಗಿದೆ. ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರು ಮತ್ತು ವಕೀಲರು ಇದ್ದರೆ ಮಾತ್ರ ಹೆಣ್ಣು ಮಕ್ಕಳ ಪರ ನ್ಯಾಯ ದೊರಕಿಸಲು ಸಾಧ್ಯ ಎಂದರು.

ಉನ್ನತ ಶಿಕ್ಷಣದ ಹಂತದಲ್ಲಿ ಬದ್ಧತೆಯಿಂದ ಹೆಣ್ಣು ಮಕ್ಕಳು ಓದಬೇಕು. ದೊಡ್ಡ ಹುದ್ದೆಯಲ್ಲಿ ಇರುವ ಮಹಿಳಾ ಅಧಿಕಾರಿಗಳನ್ನು ಕಾಲೇಜಿಗೆ ಕರೆಸಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡಿಸಬೇಕು. ಸಾಧನೆಗೆ ಹೆಣ್ಣು- ಗಂಡು ಎಂಬ ಭೇದ ಭಾವ ಇಲ್ಲ, ಚೈತನ್ಯ, ಶಕ್ತಿ, ಇದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಯಾವುದೇ ಮನುಷ್ಯನಿಗೆ ತಮ್ಮ ಜೀವಿತಾವಧಿಯ 18 ರಿಂದ 25ನೇ ವಯಸ್ಸಿನಲ್ಲಿ ಓದುವಿಕೆಗೆ ಶಕ್ತಿ ಇರುತ್ತದೆ. ಹಾಗಾಗಿ ಈ ವಯಸ್ಸಿನಲ್ಲಿ ಸಮಯವನ್ನು ವ್ಯರ್ಥ ಮಾಡದೆ ತಮ್ಮ ಗುರಿ ಸಾಧನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಓದಬೇಕು ಎಂದು ಸಲಹೆ ನೀಡಿದರು.

ಸಮಯ ಎಂಬ ಸಂಪತ್ತುನ್ನು ಇಂದು ಯುವಕರು ವ್ಯರ್ಥ ಮಾಡುತ್ತಿದ್ದಾರೆ, ಈ ಸಮಯವನ್ನು ಈ ರೀತಿ ಬೇಡವಾದ ವಿಚಾರಗಳಿಗೆ ವ್ಯರ್ಥ ಮಾಡಬಾರದು. ಇದರಿಂದ ಪದವಿ ಮುಗಿಸಿದ ಯುವಕರು ಸರಿಯಾಗಿ ಶಿಕ್ಷಣ ಪಡೆದುಕೊಳ್ಳದೆ ಪರದಾಡುತ್ತಿದ್ದಾರೆ. ಸಮಯವನ್ನು ಕಳೆದುಕೊಂಡ ಮೇಲೆ ಮತ್ತೆ ಪಡೆಯಲು ಸಾಧ್ಯವಿಲ. ಪದವಿ ಮುಗಿದ ಮೇಲೆ ಉದ್ಯೋಗ ಪಡೆಯುವುದು ಗಗನ ಕುಸುಮವಾಗಿದೆ. ಒಂದು ದಿನದಲ್ಲಿ ಕನಿಷ್ಠ 6 ಗಂಟೆಯಾದರೂ ಓದಬೇಕು. ಆದರೆ ಸಾಮಾನ್ಯವಾಗಿ ಹೆಚ್ಚು ಯುವಕರು ಓದುತ್ತಿಲ್ಲ. ಜೀವನ ಅಂದರೆ ಏನು ಎಂಬುವುದಕ್ಕೆ ನಾನಾ ಅರ್ಥವನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ. ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದೆ ಜೀವನ. ಆದ್ದರಿಂದ ಸಮಯವನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಓದುವ ಸಮಯದಲ್ಲಿ ಇತರೆ ವಿಷಯದ ಬಗ್ಗೆ ಗಮನ ಹರಿಸಬಾರದು. ಪಠ್ಯದ ಜತೆಗೆ ಸಮಾಜದ ಇನ್ನಿತರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಎಂಬುವುದು ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಯುವಕರಿಗೆ ಸಾಧನೆ ಮಾಡುವುದು ಸವಾಲಿನ ಕೆಲಸವಾಗಿದೆ. ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಕ್ರಾಂತಿ ಮಾಡುವ ಹಾದಿಯಲ್ಲಿ ಸಾಗಬೇಕು. ಮಹನೀಯರು ಹೇಳಿರುವ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು. ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಜೀ ಅಚೀವರ್ಸ್‌ 2024-25ನೇ ಸಾಲಿನ ಪ್ರಶಸ್ತಿ ವಿಜೇತ ಯು.ಜೆ. ಮಲ್ಲಿಕಾರ್ಜುನ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಶಂಕರ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಸ್ಕೌಟ್ಸ್ ಆ್ಯಂಡ್ ಗೌಡ್ಸ್ ಸಂಚಾಲಕ ಎಂ.ವಿ. ಹೇಮಾವತಿ, ರೆಡ್ ಕ್ರಾಸ್ ಸಂಚಾಲಕ ಡಾ.ಸಿ.ಎಲ್. ಶಿವಕುಮಾರ್, ಎನ್‌ಎಸ್‌ಎನ್ ಕಾರ್ಯಕ್ರಮ ಅಧಿಕಾರಿ ಜಿ.ಎಸ್. ರೇಖಾ, ಕ್ರೀಡಾ ಕಾರ್ಯದರ್ಶಿ ಡಾ.ಜಿ. ಸುನೀತಾ ಹಾಗೂ ಇತರರು ಹಾಜರಿದ್ದರು.