ಮಡಿಕೇರಿ: ಹೆಣ್ಣು ಆರ್ಥಿಕವಾಗಿ ಸಬಲರಾದಾಗ ಮಾತ್ರ ಧೈರ್ಯವಾಗಿ ಬಾಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭಾ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ತ್ರೀಶಕ್ತಿ ಬ್ಲಾಕ್ ಒಕ್ಕೂಟ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸ್ತ್ರೀಶಕ್ತಿ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ, ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನಾಚರಣೆಯು ದಿನಕ್ಕೆ, ತಿಂಗಳಿಗೆ ಸೀಮಿತವಾಗದೆ ಪ್ರತಿದಿನವೂ ಆಚರಣೆ ಆಗಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಹೆಣ್ಣಿಗೆ ಮಿತ್ರಳಾಗಿರಬೇಕು ಶತ್ರುವಾಗಬಾರದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಸಹಕಾರ ನೀಡಬೇಕು. ದಯೆ, ತಾಳ್ಮೆ ಸಹನಾಶೀಲತೆಗೆ ಹೆಸರಾದ ಹೆಣ್ಣು ಅಹಂಕಾರ ತ್ಯಜಿಸಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಗೌರವದೊಂದಿಗೆ ಜೀವನವನ್ನು ನಡೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಜಲ ದಿನಾಚರಣೆ ಮಾರ್ಚ್ ತಿಂಗಳಲ್ಲೇ ಬರುವುದರಿಂದ ಜಲ ಸಂರಕ್ಷಣೆಯು ಕೂಡ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಪ್ರತಿದಿನ ನೀರನ್ನು ಹೆಚ್ಚು ಉಪಯೋಗಿಸದೆ ಅವಶ್ಯಕತೆಗೆ ಅನುಗುಣವಾಗಿ ಬಳಸಬೇಕು. ಹೆಚ್ಚು ಮಲೀನಗೊಳಿಸಬಾರದು ಹೆಚ್ಚು ನೀರನ್ನು ವ್ಯಯಗೊಳಿಸಬಾರದು. ಜೀವ ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮಲ್ಲಿ ಹಲವಾರು ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ಮೇಕೇರಿ ಅಂಗನವಾಡಿ ಕಾರ್ಯಕರ್ತೆ ಪಿ.ಎಸ್.ಹೇಮಲತಾ ಮತ್ತು ಹಳೇ ತಾಲೂಕು ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಅನಿಲ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಕೆ.ಈ.ಭೋಜಕ್ಕಿ ಅವರನ್ನು ಸನ್ಮಾನಿಸಲಾಯಿತು.
ಪೊಲೀಸ್ ಇಲಾಖೆಯ ಸುಮತಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ತಾಲೂಕು ಶ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾ, ತಾಲೂಕು ಒಕ್ಕೂಟದ ಸದಸ್ಯರಾದ ರೂಪಾ, ಅನಿತಾ, ಪುಷ್ಪಾವತಿ, ಆಶಾಲತಾ, ಜಲಜಾಕ್ಷಿ, ಗೀತಾ, ಶಾಂತಿ, ತಾರಾಮಣಿ, ರತ್ನಾವತಿ, ಬೊಜಕ್ಕಿ ಹಾಜರಿದ್ದರು.